ರವಿ ಪೂಜಾರಿಗೆ ಮಾ.7ರವರೆಗೆ ನ್ಯಾಯಾಂಗ ಬಂಧನ: ವಿಚಾರಣೆಗೆ ವಿಶೇಷ ತಂಡ ರಚನೆ

Update: 2020-02-24 14:37 GMT

ಬೆಂಗಳೂರು, ಫೆ.24: ಕೊಲೆ, ಬೆದರಿಕೆ ಸೇರಿದಂತೆ ಗಂಭೀರ ಅಪರಾಧ ಆರೋಪ ಪ್ರಕರಣ ಸಂಬಂಧ ಪಾತಕಿ ರವಿ ಪ್ರಕಾಶ್ ಪೂಜಾರಿ(59) ಅನ್ನು ಬಂಧಿಸಿರುವ ಬೆಂಗಳೂರು ನಗರ ಪೊಲೀಸರು, ವಿಚಾರಣೆಗಾಗಿ ವಿಶೇಷ ತಂಡವನ್ನೆ ರಚನೆ ಮಾಡಿದ್ದಾರೆ.

ಈ ಕುರಿತು ಸೋಮವಾರ ನಗರ ನೃಪತುಂಗ ರಸ್ತೆಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್ ಕುಮಾರ್ ಪಾಂಡೆ, ಜನವರಿಯಲ್ಲಿ ಬಂಧಿಸಲಾಗಿದ್ದ ರವಿ ಪೂಜಾರಿ ಸೆನೆಗಲ್ ದೇಶದ ಪೊಲೀಸರ ಕಸ್ಟಡಿಯಲ್ಲಿದ್ದ. ಭಾರತಕ್ಕೆ ಕಳುಹಿಸಬೇಡಿ ಎಂದು ಅಲ್ಲಿಯ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಆ ಅರ್ಜಿಯನ್ನು 2020ರ ಫೆ.19ರಂದು ನ್ಯಾಯಾಲಯ ತಿರಸ್ಕರಿಸಿತ್ತು. ಅಲ್ಲಿನ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಫೆ.22ರಂದು ರವಿ ಪೂಜಾರಿಯನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರಲಾಗಿದೆ ಎಂದು ಹೇಳಿದರು.

ಆತನನ್ನು ಬಂಧಿಸಲು ನಾವು ಸೆನೆಗಲ್ ಗೆ ಹೋದಾಗ ಆರಂಭದಲ್ಲಿ ರವಿ ಪೂಜಾರಿ ದುಗುಡಗೊಂಡು, ಆತಂಕದಲ್ಲಿದ್ದ. ‘ನೀವು ಭಾರತದಿಂದ ಬಂದಿದ್ದೀರಾ’ ಎಂದು ನಮ್ಮನ್ನು ಹಿಂದಿಯಲ್ಲಿ ಪ್ರಶ್ನೆ ಮಾಡಿದ. ಆರಂಭದಲ್ಲಿ ಸ್ವಲ್ಪವಿರೋಧ ವ್ಯಕ್ತಪಡಿಸಿದನಾದರೂ ಆನಂತರ ವಿಮಾನ ಪ್ರಯಾಣದಲ್ಲಿ ಸಹಕಾರ ನೀಡಿದ. ನನ್ನೊಂದಿಗೆ ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಇನ್ಸ್‌ಪೆಕ್ಟರ್‌ಗಳಾದ ಮಲ್ಲಪ್ಪ, ಸಿದ್ದಪ್ಪ, ಪೇದೆ ಜಯಪ್ರಕಾಶ್ ಜತೆಯಲ್ಲಿದ್ದರು ಎಂದು ಅವರು ವಿವರಿಸಿದರು.

ಹತ್ತಾರು ಕಡೆ ಸುತ್ತಾಟ: 1994ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಭೂಗತ ಪಾತಕಿ ಒಬ್ಬನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ. ತಾನು ಕರ್ನಾಟಕದ ಮೈಸೂರು ನಿವಾಸಿ ಎಂದು ನಕಲಿ ದಾಖಲಾತಿ ಸಲ್ಲಿಸಿ ಮೊದಲು ನೇಪಾಳಕ್ಕೆ ಹೋಗಿ ಕೆಲಕಾಲ ನೆಲಸಿದ ಬಳಿಕ ಬ್ಯಾಂಕಾಕ್ ತೆರಳಿದ್ದ. ಆನಂತರ ಉಗಾಂಡಕ್ಕೆ ಹೋಗಿ, ಅಲ್ಲಿಂದ ಪಾಸ್‌ಪೋರ್ಟ್ ಪಡೆದು ಬುರ್ಕಿನೋಪಾಸೊದಲ್ಲಿ ಸುಮಾರು ವರ್ಷಗಳ ಕಾಲ ನೆಲೆಸಿ ಆನಂತರ ಸೆನೆಗಲ್ ಗೆ ಪರಾರಿಯಾಗಿದ್ದ. ಬುರ್ಕಿನೋಪಾಸೊದಲ್ಲಿ 12 ವರ್ಷ ವಾಸವಿದ್ದ ರವಿಪೂಜಾರಿ ಅಲ್ಲಿ ಸಮಾಜ ಸೇವೆಯ ಮೂಲಕ ಪ್ರಭಾವಿ ವ್ಯಕ್ತಿಯಾಗಿದ್ದ. ಆವರೆಗೂ ಭಾರತದ ಪಾಸ್‌ಪೋರ್ಟ್ ಮೇಲೆ ಪ್ರಯಾಣ ಮಾಡುತ್ತಿದ್ದ ಆತ, ಏಕಾಏಕಿ ಬುರ್ಕಿನೋಪಾಸೊ ನಾಗರಿಕತ್ವ ಪಡೆದುಕೊಂಡಿದ್ದ.

ಅಲ್ಲಿಂದ ಸೆನೆಗಲ್ ಗೆ ತೆರಳಿ ಅಲ್ಲಿ ಭಾರತೀಯ ರೆಸ್ಟೋರೆಂಟ್‌ನ್ನು ಆರಂಭಿಸಿ ಒಳ್ಳೆಯ ವ್ಯಾಪಾರಿಯಾಗಿದ್ದ. ಸೆನೆಗಲ್ ನ ಸಭ್ಯ ನಾಗರಿಕನಾಗಿ ವರ್ತಿಸುತ್ತಿದ್ದ. ಜೊತೆಗೆ ಅಲ್ಲಿನ ಹಳ್ಳಿಗಾಡಿನ ಪ್ರದೇಶಗಳಲ್ಲಿ ಉಚಿತವಾಗಿ ಕೊಳವೆ ಬಾವಿ ಕೊರೆಸುತ್ತಿದ್ದ. ನವರಾತ್ರಿ ಸಂದರ್ಭದಲ್ಲಿ ಬಡವರಿಗೆ ಬಟ್ಟೆ ಹಾಗೂ ಆಹಾರ ದಾನ ಮಾಡುತ್ತಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ ಎಂದು ಅಮರ್‌ ಕುಮಾರ್ ಪಾಂಡೆ ವಿವರಿಸಿದರು.

ಹತ್ತಾರು ಪ್ರಕರಣ: ತಿಲಕ್‌ ನಗರದಲ್ಲಿ ಕೊಲೆ, ಶಬನಂ ಡೆವಲಪರ್ಸ್‌ನ ಶೈಲಜಾ ರವಿ ಕೊಲೆ ಪ್ರಕರಣ ಸೇರಿದಂತೆ ಬೆಂಗಳೂರಿನಲ್ಲಿಯೇ ಈತನ ವಿರುದ್ಧ 47 ಪ್ರಕರಣಗಳು ಸೇರಿದಂತೆ ಮುಂಬೈಯ ಠಾಣಾ, ಗುಜರಾತ್, ಕೇರಳ ಒಳಗೊಂಡಂತೆ ಒಟ್ಟು 97 ಪ್ರಕರಣಗಳು ದಾಖಲಾಗಿದೆ.

ರವಿ ಪೂಜಾರಿ ಹಣಕ್ಕಾಗಿ ಸಿನೆಮಾ ಕಲಾವಿದರನ್ನು, ಉದ್ಯಮಿಗಳನ್ನು, ಪ್ರಮುಖ ವೈದ್ಯರನ್ನು ಹಾಗೂ ರಾಜಕಾರಣಿಗಳಿಗೆ ಬೆದರಿಕೆ ಒಡ್ಡಿದ್ದ ಗಂಭೀರ ಆರೋಪ ಇದೆ. 2018ರಲ್ಲಿ ಮಾಜಿ ಸಚಿವರಾದ ತನ್ವೀರ್ ಸೇಠ್, ಸಂತೋಷ್ ಲಾಡ್‌ಗೆ ಬೆದರಿಕೆ ಹಾಕಿದ್ದ ಆರೋಪವೂ ಇದೆ. ಹೀಗೆ, ರವಿ ಪೂಜಾರಿ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆ ವಿಚಾರಣೆಗಾಗಿ ವಿಶೇಷ ತಂಡವನ್ನೇ ರಚನೆ ಮಾಡಲಾಗಿದೆ. ಹೆಚ್ಚಿನ ಮಾಹಿತಿ ತನಿಖೆ ಬಳಿಕ ಬಹಿರಂಗಪಡಿಸಲಾಗುವುದೆಂದು ಅಮರ್ ಕುಮಾರ್ ಪಾಂಡೆ ತಿಳಿಸಿದರು.

3ನೇ ಪಾತಕಿ

ಕಳೆದೆರಡು ವರ್ಷಗಳ ಅಂತರದಲ್ಲಿ ಭಾರತಕ್ಕೆ ಹಸ್ತಾಂತರವಾದ ಮೂರನೆ ಭೂಗತ ಪಾತಕಿ ರವಿ ಪೂಜಾರಿ. ಈ ಹಿಂದೆ ಛೋಟಾ ರಾಜನ್ ಮತ್ತು ಬನ್ನಂಜೆ ರಾಜಾನನ್ನು ಕರೆತರಲಾಗಿತ್ತು.

ಮಾ.7ವರೆಗೂ ನ್ಯಾಯಾಂಗ ಬಂಧನ

ಸೆನೆಗಲ್‌ನಲ್ಲಿ ಬಂಧಿಸಲಾದ ರವಿ ಪೂಜಾರಿಯನ್ನು ರವಿವಾರ ರಾತ್ರಿಯೇ ಬೆಂಗಳೂರಿಗೆ ಕರೆತಂದಿದ್ದು, ತಿಲಕ್ ನಗರ ಕೊಲೆ ಪ್ರಕರಣದಲ್ಲಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆತನನ್ನು ಮಾ.7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

-ಅಮರ್ ಕುಮಾರ್ ಪಾಂಡೆ

ಹಲವು ಹೆಸರುಗಳು

* ರವಿ ಪೂಜಾರಿ ನಿಜವಾದ ಹೆಸರು ರವಿಪ್ರಕಾಶ್ ಪೂಜಾರಿ

* ಆತನ ಗುರು ಛೋಟಾ ರಾಜನ್, ರವಿ ಪೂಜಾರಿಗೆ ಆಂಥೋಣಿ ಫರ್ನಾಂಡಿಸ್ ಎಂಬ ಹೆಸರನ್ನು ನಾಮಕರಣ ಮಾಡಿದ್ದ.

* ಬಳಿಕ ಜೋಸೆಫ್ ಫರ್ನಾಂಡಿಸ್ ಎಂದು ಗುರುತಿಸಿಕೊಂಡಿದ್ದ.

* ರಾಕಿ ಫರ್ನಾಂಡಿಸ್ ಹೆಸರಿನಲ್ಲಿ ಸೆನಗಲ್‌ನಲ್ಲಿ ವ್ಯವಹಾರ

ಸೆನಗಲ್ ಜನರಿಗೆ ಬೆಳಕಾಗಿದ್ದ ರವಿ

ಭಾರತದಲ್ಲಿ ಶ್ರೀಮಂತರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಕಾಯಕದಲ್ಲಿಯೇ ತೊಡಗಿದ್ದ ರವಿ ಪೂಜಾರಿ, ಸೆನಗಲ್ ದೇಶದಲ್ಲಿ ಗೌರವಸ್ಥನಾಗಿ ಅಲ್ಲಿನ ಹಳ್ಳಿಗಾಡಿನ ಜನರಿಗೆ ಸಹಾಯ ಮಾಡುತ್ತಿದ್ದ. ಬರಗಾಲ ಸಂದರ್ಭ, ನೀರು ಇಲ್ಲದ ಕಡೆ ಕೊಳಗೆ ಬಾವಿಗಳನ್ನು ಉಚಿತವಾಗಿ ಕೊರೆಸಿಕೊಡುತ್ತಿದ್ದ. ಹಬ್ಬದ ಸಂದರ್ಭದಲ್ಲಿ ಉಚಿತ ಬಟ್ಟೆ, ಆಹಾರ ವಿತರಣೆ ಮಾಡುತ್ತಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News