ಇರಾನ್‌ನಲ್ಲೂ ಕೊರೋನಾ ಅಟ್ಟಹಾಸ ಸೋಂಕಿಗೆ ಕನಿಷ್ಠ 50 ಬಲಿ?

Update: 2020-02-24 18:30 GMT

ಟೆಹರಾನ್, ಫೆ.24: ಕೊರೋನ ವೈರಸ್ ಸೋಂಕಿಗೆ ಇರಾನ್ ಕೂಡಾ ತತ್ತರಿಸಿದ್ದು, ಅಲ್ಲಿ ಕನಿಷ್ಠ 50 ಮಂದಿ ಈ ಮಾರಕ ಸೋಂಕಿನಿಂದ ಸಾವನ್ನಪ್ಪಿದ್ದಾರೆಂದು ಇರಾನ್‌ನ ಅರೆಸರಕಾರಿ ಸುದ್ದಿಸಂಸ್ಥೆ ಇಲ್ನಾ ವರದಿ ಮಾಡಿದೆ. ಅದರೆ ಸರಕಾರವು ಅಧಿಕೃತವಾಗಿ ಅದನ್ನು ದೃಢಪಡಿಸಿಲ್ಲ.

  ಇರಾನ್‌ನ ಕ್ವಾಮ್ ನಗರದಲ್ಲಿ ಕೊರೋನ ಭಯಾನಕವಾಗಿ ಹರಡುತ್ತಿದ್ದು ಅಲ್ಲಿ ರೋಗ ಶಂಕೆಯಿಂದಾಗಿ 250ಕ್ಕೂ ಅಧಿಕ ಮಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಖೊಮ್ ನಗರದ ಅಧಿಕಾರಿ ಅಹ್ಮದ್ ಅಮಿರಿಯಾಬಾದಿ ಫರ್ಹಾನಿ ಹೇಳಿದ್ದಾರೆ. ಖೊಮ್ ನಗರವು ಇರಾನ್‌ನ ಅತ್ಯಂತ ಶಿಯಾ ಸಮುದಾಯದ ಜನಪ್ರಿಯ ಧಾರ್ಮಿಕ ಅಧ್ಯಯನ ಕೇಂದ್ರವಾಗಿದ್ದು, ಅಲ್ಲಿಗೆ ಇರಾನ್ ಹಾಗೂ ಇತರ ರಾಷ್ಟ್ರಗಳಿಂದ ಜನರು ಆಗಮಿಸುತ್ತಿರುತ್ತಾರೆ.

    ಫೆಬ್ರವರಿ 13ರಿಂದ ಇರಾನ್‌ನಲ್ಲಿ ಒಟ್ಟು 50 ಮಂದಿ ಇರಾನ್‌ನಲ್ಲಿ ಕೊರೊನಾಗೆ ಬಲಿಯಾಗಿದ್ದಾರೆಂದು ಅವರು ಫರ್ಹಾನಿ ತಿಳಿಸಿದ್ದಾರೆ. ಆದಾಗ್ಯೂ ಇರಾನ್‌ನಲ್ಲಿ ಅಧಿಕೃತವಾಗಿ ಕೊರೋನ ವೈರಸ್‌ನಿಂದ ಸಾವನ್ನಪ್ಪಿದ ಪ್ರಕರಣ ಫೆಬ್ರವರಿ 19ರಂದು ವರದಿಯಾಗಿತ್ತು.

ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಚೀನಾಗಳಿಂದ ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ ವ್ಯಕ್ತಿಗಳು ಇರಾನ್‌ನಲ್ಲಿ ಕೊರೋನ ವೈರಸ್ ಹರಡಲು ಮೂಲ ಕಾರಣರೆಂದು ಇರಾನ್ ಆರೋಗ್ಯ ಸಚಿವ ಅಸಾದುಲ್ಲಾ ಅಬ್ಬಾಸಿ ತಿಳಿಸಿದ್ದಾರೆಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಕೊರೋನಾ ಹರಡುವ ಭೀತಿಯಿಂದಾಗಿ ಇರಾನ್‌ನಾದ್ಯಂತ ಸತತ ಎರಡನೆ ದಿನವೂ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ. ಈ ಮಧ್ಯೆ ನೆರೆಯ ರಾಷ್ಟ್ರಗಳು ಕೂಡಾ ಇರಾನ್‌ನಿಂದ ಆಗಮಿಸುವ ಪ್ರಯಾಣಿಕರಿಂದ ಕೊರೋನಾ ಸೋಂಕು ಹರಡುತ್ತಿರುವುದಾಗಿ ಆರೋಪಿಸಿವೆ ಹಾಗೂ ತನ್ನ ಗಡಿಗಳನ್ನು ಅದು ಇರಾನಿ ನಾಗರಿರಿಗೆ ಮುಚ್ಚಿಹಾಕಿದೆ.

ಇರಾನ್ ಈವರೆಗೆ ಖೊಮ್, ಟೆಹರಾನ್ ಸೇರಿದಂತೆ ಐದು ನಗರಗಳಲ್ಲಿ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿರುವುದಾಗಿ ತಿಳಿಸಿದೆ.

    ಈ ಮಧ್ಯೆ ಗಲ್ಫ್ ದೇಶವಾದ ಕುವೈತ್‌ನಲ್ಲಿಯೂ ಕೊರೋನ ಸೋಂಕಿನ ಮೂರು ಪ್ರಕರಣಗಳು ವರದಿಯಾಗಿವೆ. ಇರಾನ್‌ನ ಮಾಶಾದ್ ನಗರದಿಂದ ಹಿಂತಿರುಗಿ ಬಂದ ಮೂರು ಪ್ರಯಾಣಿಕರಿಗೆ ಕೊರೋನ ಸೋಂಕು ತಗಲಿದೆಯೆಂದು ಅದು ಹೇಳಿದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News