ಸಿಎಎ : ದೆಹಲಿ ಹಿಂಸಾಚಾರಕ್ಕೆ ಏಳು ಮಂದಿ ಬಲಿ

Update: 2020-02-26 10:33 GMT

ಹೊಸದಿಲ್ಲಿ : ಈಶಾನ್ಯ ದೆಹಲಿಯ ಜಾಫರಾಬಾದ್‌ನಿಂದ ಚಾಂದ್‌ಬಾಗ್ ಮತ್ತು ಕಾರವಲ್ ನಗರ ಪ್ರದೇಶದಲ್ಲಿ ಕೋಮು ಗಲಭೆ ಮತ್ತು ವ್ಯಾಪಕ ಹಿಂಸಾಚಾರ ನಡೆದಿದ್ದು, ಸಿಎಎ ಪರ ಹಾಗೂ ವಿರೋಧಿ ಹೋರಾಟಗಾರರ ನಡುವಿನ ಸಂಘರ್ಷದಲ್ಲಿ ಹೆಡ್ ಕಾನ್‌ಸ್ಟೇಬಲ್ ಸಹಿತ ಏಳು ಮಂದಿ ಮೃತಪಟ್ಟಿದ್ದು, ಹಲವರಿಗೆ ಗಾಯವಾಗಿದೆ.

 ಹಿಂಸಾಚಾರ ಘಟನೆಯ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ಕರೆದಿದ್ದು, ಸಭೆಗೆ ದಿಲ್ಲಿ ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ವಿವಿಧ ಪಕ್ಷಗಳ ಪ್ರತಿನಿಧಿಗಳನ್ನು ಆಹ್ವಾನಿಸಿದ್ದಾರೆ.

ಸುಮಾರು ಏಳು ಗಂಟೆಗಳ ಕಾಲ ಸೋಮವಾರ ಉಭಯ ಬಣಗಳ ನಡುವೆ ಘರ್ಷಣೆ ನಡೆದಿದೆ.

ಬೀದಿಗಳು ಅಕ್ಷರಶಃ ಹೊತ್ತಿ ಉರಿಯುತ್ತಿದ್ದು, ಕಲ್ಲು, ಗಾಜು ಹಾಗೂ ಇಟ್ಟೆಗೆಗಳನ್ನು ಪರಸ್ಪರರು ಎಸೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದೆ. ಕಲ್ಲುತೂರಾಟ, ಗುಂಡು ಹಾರಾಟ ಮತ್ತು ಹಿಂಸಾಚಾರದಲ್ಲಿ ಒಬ್ಬ ಪೊಲೀಸ್ ಸೇರಿದಂತೆ ಐದು ಮಂದಿ ಜೀವ ಕಳೆದುಕೊಂಡಿದ್ದಾರೆ. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಹಲವು ಮಂದಿ ಪೊಲೀಸರು, ಡಿಸಿಪಿ ಮತ್ತು ದಾರಿಹೋಕರು ಸೇರಿದ್ದಾರೆ.

ಸೋಮವಾರ ರಾತ್ರಿಯಾಗುತ್ತಿದ್ದಂತೆ ಹಿಂಸಾಚಾರ ಭುಗಿಲೆದ್ದಿದೆ. ಪರಿಸ್ಥಿತಿ ಇನ್ನೂ ಬಿಗುವಿನಿಂದ ಕೂಡಿದ್ದು, ಹಿಂಸಾ ಪೀಡಿತ ಪ್ರದೇಶಗಳಲ್ಲಿ ಅಪರಾಧ ದಂಡಸಂಹಿತೆಯ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರಿಸ್ಥಿತಿ ಬಿಗಡಾಯಿಸಿದರೆ ಕರ್ಫ್ಯೂ ವಿಧಿಸಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ. ಭದ್ರತಾ ಪಡೆ ಸಿಬ್ಬಂದಿ ಪಥಸಂಚಲನ ನಡೆದಿದ್ದು, ಸಿಆರ್‌ಪಿಎಫ್ ಸೇರಿದಂತೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.

ಮೃತ ಪೊಲೀಸ್ ಪೇದೆಯನ್ನು ರತನ್‌ಲಾಲ್ ಎಂದು ಗುರುತಿಸಲಾಗಿದೆ. ಶಹದಾರ ಡಿಸಿಪಿ ಅಮಿತ್ ಶರ್ಮಾ ಅವರ ತಲೆಗೆ ತೀವ್ರ ಗಾಯವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಂದ್‌ಬಾಗ್‌ನಲ್ಲಿ ಅವರನ್ನು ವಾಹನದಿಂದ ಎಳೆದುಹಾಕಿ ಹಲ್ಲೆ ನಡೆಸಿದ ಗುಂಪು ಅವರ ವಾಹನಕ್ಕೆ ಬೆಂಕಿ ಹಚ್ಚಿದೆ.

ಐದು ಮಂದಿಯ ಸಾವಿಗೆ ಕಾರಣ ದೃಢಪಟ್ಟಿಲ್ಲ. ಮಂಗಳವಾರ ಮರಣೋತ್ತರ ಪರೀಕ್ಷೆ ಬಳಿಕ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಗೋಕುಲಪುರಿಯಲ್ಲಿ ಮುಖ್ಯಪೇದೆ ಹತ್ಯೆಗೀಡಾಗಿದ್ದು, ಇತರ ಗಾಯಾಳುಗಳನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋಕುಲಪುರಿ ಎಸಿಸಿ ಅನೂಜ್ ಕುಮಾರ್, ಇಬ್ಬರು ಸಿಆರ್‌ಪಿಎಫ್ ಯೋಧರು ಮತ್ತು ಅಗ್ನಿಶಾಮಕ ದಳದ ಮೂವರು ಗಾಯಗೊಂಡವರಲ್ಲಿ ಸೇರಿದ್ದಾರೆ. ಹಲವು ಮಂದಿ ಪತ್ರಕರ್ತರನ್ನು ಕೂಡಾ ಹಿಡಿದು ಥಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News