ಬೆಂಗಳೂರು: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಬೀದಿಗಿಳಿದ ಸಾವಿರಾರು ಮಹಿಳೆಯರು

Update: 2020-02-25 13:33 GMT

ಬೆಂಗಳೂರು, ಫೆ.25: ಮೈಕ್ರೋ ಫೈನಾನ್ಸ್ ಸಂಸ್ಥೆಗಳು ದೌರ್ಜನ್ಯ ನಡೆಸಿ ಸಾಲ ವಸೂಲು ಮಾಡುತ್ತಿದೆ ಎಂದು ಆರೋಪಿಸಿ ಸಾವಿರಾರು ಮಹಿಳೆಯರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನವನ ಮೈದಾನದಲ್ಲಿ ಕರ್ನಾಟಕ ರಾಜ್ಯ ಋಣ ಹೋರಾಟ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ಮಹಿಳೆಯರು, ಬಡ ಮಹಿಳಾ ಗುಂಪುಗಳಿಗೆ ಆರ್ಥಿಕ ನೆರವು ಒದಗಿಸುವ ಹೆಸರಿನಲ್ಲಿ ಸಾಲ ನೀಡಿ ಈಗ ದೌರ್ಜನ್ಯದ ಕ್ರಮಗಳ ಮೂಲಕ ಸಾಲ ವಸೂಲಿಗೆ ಮುಂದಾಗಿದ್ದಾರೆ ಎಂದು ದೂರಿದರು.

ಸಣ್ಣ ಹಣಕಾಸು ವ್ಯವಹಾರ ನಡೆಸಲು ಮಹಿಳಾ ಸಬಲೀಕರಣಕ್ಕಾಗಿ ಜೆಎಲ್‌ಜಿ ಸಾಲ ನೀಡಿ ಗ್ರಾಮೀಣ ಬಡತನ ನಿರ್ಮೂಲನೆ ಮಾಡುವ ಸದುದ್ದೇಶಕ್ಕಾಗಿ ಆರ್‌ಬಿಐನಿಂದ ಅನುಮತಿ ಪಡೆದ ಈ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅತಿದೊಡ್ಡ ಹಣಕಾಸು ವ್ಯವಹಾರ ನಡೆಸುತ್ತಾ, ಈ ದೇಶದ ಆರ್ಥಿಕತೆ ಕುಸಿತಕ್ಕೂ ಕಾರಣವಾಗಿವೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಕಳೆದ ಹತ್ತಾರು ವರ್ಷಗಳಿಂದ ಈ ಮೈಕ್ರೋ ಫೈನಾನ್ಸ್ ಕಂಪೆನಿಗಳ ದುಬಾರಿ ಬಡ್ಡಿ ದರಗಳನ್ನು ಸಹಿಸಿಕೊಂಡು, ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಿಂದ ಸಾಲ ಮರುಪಾವತಿ ಮಾಡುತ್ತಾ ಬಂದಿದ್ದಾರೆ. ಆದರೆ, ಈಗ ಕಳೆದ ಕೆಲವು ತಿಂಗಳುಗಳಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಮಹಿಳೆಯರಿಗೆ ದುಡಿಮೆ ಇಲ್ಲದಂತಾಗಿ ಸಾಲ ಮರುಪಾವತಿ ಮಾಡುವುದು ಅಸಾಧ್ಯವಾಗಿದೆ. ಕೂಲಿ ಕೆಲಸ ಸಿಗದಂತಾಗಿದೆ. ಇಂತಹ ಸಮಯದಲ್ಲಿ ಬಲವಂತದ ಸಾಲ ವಸೂಲಿಯಿಂದಾಗಿ ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಮೈಕ್ರೋ ಫೈನಾನ್ಸ್ ಕಂಪೆನಿ ಸಿಬ್ಬಂದಿ ಸಾಲ ಪಡೆದ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಇದರಿಂದ ನೊಂದ ಕೆಲವರು ಆತ್ಮಹತ್ಯೆಗೂ ಮುಂದಾಗಿದ್ದಾರೆ. ಆದ್ದರಿಂದ ಇಂಥ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದೇ ರೀತಿ, ಪರವಾನಗಿ ಇಲ್ಲದೆ ಹಣಕಾಸು ವ್ಯವಹಾರದಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಬಲವಂತದ ಸಾಲ ವಸೂಲಿ ಮಾಡುವ ಕಂಪೆನಿಗಳ ಲೈಸನ್ಸ್ ರದ್ದು ಮಾಡಬೇಕು ಮತ್ತು ಅವುಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ನೀಡುವ ನಿಯಮಗಳನ್ನು ಸಡಿಲಗೊಳಿಸಬೇಕು ಹಾಗೂ ಋಣ ಮುಕ್ತಾ ಕಾಯ್ದೆಯೊಳಗೆ ಸೇರಿಸಿ ಸಾಲ ಮನ್ನಾ ಮಾಡಬೇಕು ಎಂದು ಪ್ರತಿಭಟನಾ ನಿರತ ಮಹಿಳೆಯರು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಬಿ.ಎಂ.ಭಟ್, ಪ್ರಧಾನ ಕಾರ್ಯದರ್ಶಿ ಅನಂತ ನಾಯ್ಕ, ಸೌಮ್ಯಾ ಸಾಗರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಸಚಿವರ ಭರವಸೆ

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲ ಸಂಬಂಧ ಮಾರ್ಚ್ ಮೊದಲನೇ ವಾರದಲ್ಲಿಯೇ ಸಭೆ ನಡೆಸಲಾಗುವುದು. ಅದೇ ರೀತಿ, ದೌರ್ಜನ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಪತ್ರ ಬರೆಯಲಾಗುವುದು.

-ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News