'ಕ್ಯಾಸಿನೋ' ವಿರುದ್ಧ ಆಕ್ರೋಶ: ಸಿ.ಟಿ.ರವಿ ಮುಖವಾಡ ತೊಟ್ಟು ರಸ್ತೆಯಲ್ಲಿಯೇ ಇಸ್ಪೀಟ್ ಆಟ !

Update: 2020-02-25 14:32 GMT

ಬೆಂಗಳೂರು, ಫೆ.25: ರಾಜ್ಯದಲ್ಲಿ ಕ್ಯಾಸಿನೋ ಜೂಜು ಕೇಂದ್ರ ತೆರೆಯುವ ಬಗೆಗಿನ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು, ಸಚಿವ ಸಿ.ಟಿ.ರವಿ ಮುಖವಾಡ ತೊಟ್ಟು ರಸ್ತೆಯಲ್ಲಿಯೇ ಇಸ್ಪೀಟ್ ಎಲೆಗಳಿಂದ ಆಟ ಆಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಸದಸ್ಯರು, ರಾಜ್ಯ ಸರಕಾರ ಹಾಗೂ ಸಚಿವರ ವಿರುದ್ಧ ಘೋಷಣೆ ಕೂಗಿದರು.

ರಾಜ್ಯದಲ್ಲಿ ಶ್ರೀಲಂಕಾ, ಅಮೆರಿಕಾ ಮಾದರಿಯಲ್ಲಿ ಕ್ಯಾಸಿನೋ ಕೇಂದ್ರಗಳನ್ನು ತೆರೆಯಲು ಸರಕಾರ ಚಿಂತನೆ ನಡೆಸುತ್ತಿದೆ. ತಮ್ಮ ರಾಜ್ಯದವರು ಕ್ಯಾಸಿನೋ ಆಡಲು ಬೇರೆ ರಾಜ್ಯಗಳು ಹಾಗೂ ದೇಶಗಳಿಗೆ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲೇ ಕ್ಯಾಸಿನೋ ಕೇಂದ್ರಗಳನ್ನು ತೆರೆಯೋದರಲ್ಲಿ ತಪ್ಪೇನಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವುದು ಸರಿಯಲ್ಲ. ಈ ಕೂಡಲೇ ಅವರು ಕ್ಷಮೆ ಕೇಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಿ.ಟಿ.ರವಿ ಬೇಕಾದರೆ ಗೋವಾ, ಶ್ರೀಲಂಕಾಗೆ ಹೋಗಲಿ. ಇಂತಹ ಚಿಂತನೆಯನ್ನು ರಾಜ್ಯ ಸರಕಾರ ಕೈಬಿಟ್ಟು, ಜನರ ಸೇವೆಗೆ ಮುಂದಾಗಲಿ ಎಂದು ಪ್ರತಿಭಟನಾ ನಿರತ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜನಾರ್ಧನ್, ಎ.ಆನಂದ, ಶೇಖರ್ ಜಯಸಿಂಹ, ಆದಿತ್ಯ ಮುನಿರಾಜು ಸೇರಿದಂತೆ ಪ್ರಮುಖರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News