ಗಲಾಟೆ ಸಾಧ್ಯತೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಅಮೂಲ್ಯಳ ವಿಚಾರಣೆ ನಡೆಸಲು ಪೊಲೀಸರಿಂದ ಕೋರ್ಟ್‌ಗೆ ಮನವಿ

Update: 2020-02-25 15:20 GMT

ಬೆಂಗಳೂರು, ಫೆ.25: ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಿಎಎ ವಿರೋಧಿಸಿ ನಡೆದ ಬಹಿರಂಗ ಸಮಾವೇಶದಲ್ಲಿ ಪಾಕಿಸ್ತಾನ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದ ಅಮೂಲ್ಯಳನ್ನು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ತೆರೆದ ನ್ಯಾಯಾಲಯದಲ್ಲಿ ಹಾಜರುಪಡಿಸುವುದು ಸಾಧ್ಯವಿಲ್ಲ. ಹೀಗಾಗಿ ನ್ಯಾಯಾಧೀಶರು ವಿಡಿಯೋ ಕಾನ್ಫರೆನ್ಸ್ ಮೂಲಕ ಆಕೆಯ ವಿಚಾರಣೆ ನಡೆಸಲಿ ಎಂದು ಡಿಸಿಪಿ ರಮೇಶ್ ಬಾನೋತ್ 5ನೆ ಎಸಿಎಂಎಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ಸಿಎಎ ವಿರೋಧಿಸಿ ಇತ್ತೀಚೆಗೆ ವಿವಿಧ ಸಂಘಟನೆಗಳು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ಚಳವಳಿಯಲ್ಲಿ 19 ವರ್ಷದ ಅಮೂಲ್ಯ 'ಪಾಕಿಸ್ತಾನ ಝಿಂದಾಬಾದ್' ಘೋಷಣೆ ಕೂಗುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಳು. ಕೂಡಲೇ ಅವಳನ್ನು ವಶಕ್ಕೆ ಪಡೆದ ಉಪ್ಪಾರಪೇಟೆ ಪೊಲೀಸರು ಅಂದು ರಾತ್ರಿಯೇ ನ್ಯಾಯಾಧೀಶರ ಎದುರು ಹಾಜರುಪಡಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಪಡೆದಿದ್ದರು.

ನ್ಯಾಯಾಂಗ ಬಂಧನದಲ್ಲಿರುವ ಅಮೂಲ್ಯ ಇದೀಗ ಪರಪ್ಪನ ಅಗ್ರಹಾರದಲ್ಲಿದ್ದು, ಈ ನಡುವೆ ಆಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆ ಬರಲಿದೆ. ಹೀಗಾಗಿ ಅಮೂಲ್ಯಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲೇಬೇಕಾದ ಸಂದಿಗ್ಧತೆ ಪೊಲೀಸರಿಗೆ ಎದುರಾಗಿದೆ.

ಆದರೆ, ಈ ಪರಿಸ್ಥಿತಿಯಲ್ಲಿ ಅಮೂಲ್ಯಳನ್ನು ತೆರೆದ ನ್ಯಾಯಾಲಯದಲ್ಲಿ ಹಾಜರುಪಡಿಸುವುದು ಅಸಾಧ್ಯ. ಈಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರೆ ಹುಬ್ಬಳ್ಳಿ ಮಾದರಿಯಲ್ಲಿ ದೊಡ್ಡ ಮಟ್ಟದ ಗಲಾಟೆ ನಡೆಯುವ ಸಾಧ್ಯತೆ ಇದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಖುದ್ದು ಹಾಜರಾತಿ ಕಷ್ಟ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಯ ವಿಚಾರಣೆ ನಡೆಸುವಂತೆ ಸ್ವತಃ ಡಿಸಿಪಿ ರಮೇಶ್ ಬಾನೋತ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News