ಖ್ಯಾತ ಸುದ್ದಿ ವಾಚಕ ಗಜಾನನ ಹೆಗಡೆ ನಿಧನ

Update: 2020-02-25 15:59 GMT

ಬೆಂಗಳೂರು, ಫೆ.25: ಈಟಿವಿ, ಜಿಟಿವಿ, ಕಸ್ತೂರಿ ಹಾಗೂ ಪ್ರಜಾಟಿವಿಯ ಮೊದಲ ಸುದ್ದಿವಾಚಕರಾಗಿ ನಾಡಿನ ಗಮನ ಸೆಳೆದಿದ್ದ ಗಜಾನನ ಹೆಗಡೆ ನಿಧನರಾಗಿದ್ದು, ಅವರಿಗೆ 51 ವರ್ಷ ವಯಸ್ಸಾಗಿತ್ತು.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗಜಾನನ ಹೆಗಡೆ ರಂಗಭೂಮಿ, ಸಂಗೀತ, ಹಿನ್ನೆಲೆ ಕಂಠದಾನ ಕಲಾವಿದ ಸೇರಿದಂತೆ ಹತ್ತು ಹಲವು ಆಯಾಮಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.

ಕೆಲಕಾಲದಿಂದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು, ಮಂಗಳವಾರ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ನಿರರ್ಗಳ ಮಾತು, ವಾಗ್ಮಿಯತೆಯಿಂದ ಗಜಾನನ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಅಚ್ಚುಕಟ್ಟಾದ ನಿರೂಪಣೆಗೆ ಹೆಸರಾಗಿದ್ದ ಅವರು, ಕಳೆದ ಎರಡು ದಶಕಗಳಲ್ಲಿ ಹಲವು ನಿರೂಪಕರನ್ನು ಹುಟ್ಟು ಹಾಕಿದ್ದರು.

ಜಾತ್ಯತೀತ ಮನೋಭಾವ ಹೊಂದಿದ್ದ ಹೆಗಡೆ ಅವರ ಪ್ರತಿಭೆಯ ಅನಾವರಣಕ್ಕೆ ಸರಿಯಾದ ಅವಕಾಶ ಸಿಗಲಿಲ್ಲ. ಹಲವು ವಲಯಗಳಲ್ಲಿ ಅಗಾಧ ಪ್ರತಿಭೆ ಹೊಂದಿದ್ದ ಗಜಾನನ ಹೆಗಡೆ ಅವರು ಯಾವುದೇ ಕ್ಷೇತ್ರದಲ್ಲೂ ಹೆಚ್ಚು ಕಾಲ ತಮ್ಮನ್ನು ಅರ್ಪಿಸಿಕೊಂಡಿರಲಿಲ್ಲ.

ಇತ್ತೀಚೆಗೆ ವೈವಾಹಿಕ ಬದುಕಿನಲ್ಲೂ ವಿಫಲರಾಗಿದ್ದ ಗಜಾನನ ಹೆಗಡೆ ಅವರನ್ನು ಅವರ ಸಂಗಾತಿ ಮತ್ತು ಮಕ್ಕಳು ತೊರೆದು ದೂರ ಉಳಿದಿದ್ದರು ಎನ್ನಲಾಗಿದೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ವೇತನ ಸಮಸ್ಯೆ ಎದುರಾದ ನಂತರ ಅವರ ಬದುಕು ಮತ್ತಷ್ಟು ದುರ್ಬರಗೊಂಡಿತ್ತು. ಇತ್ತೀಚೆಗೆ ಮನೆಯಲ್ಲಿ ಮಕ್ಕಳಿಗೆ ಸಂಗೀತ ಹೇಳಿಕೊಟ್ಟು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. 

ಹೆಗಡೆ ನಿಧನಕ್ಕೆ ಸಿಎಂ ಸಂತಾಪ

ಪ್ರಜಾ ಟಿವಿಯ ಸುದ್ದಿ ವಾಚಕರಾಗಿದ್ದ ಗಜಾನನ ಹೆಗಡೆ ಅವರ ಆಕಸ್ಮಿಕ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಆಕಸ್ಮಿಕ ನಿಧನ ಆಘಾತಕಾರಿ ಎಂದಿರುವ ಸಿಎಂ ಅವರು ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News