ದಿಲ್ಲಿಯ ಸರಕಾರಿ ಶಾಲೆಗೆ ಭೇಟಿ ನೀಡಿದ ಮೆಲಾನಿಯಾ ಟ್ರಂಪ್

Update: 2020-02-25 18:32 GMT

ಹೊಸದಿಲ್ಲಿ, ಫೆ. 25: ಹೊಸದಿಲ್ಲಿಯ ಸರ್ವೋದಯಾ ಕೋ-ಎಜುಕೇಶನ್ ಸೀನಿಯರ್ ಸೆಕಂಡರಿ ಶಾಲೆಯ ‘ಸಂತಸ ತರಗತಿ’ಗೆ ಮಂಗಳವಾರ ಅಪರಾಹ್ನ ಭೇಟಿ ನೀಡಿದ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ 1 ಗಂಟೆ ವಿದ್ಯಾರ್ಥಿಗಳೊಂದಿಗೆ ಕಳೆದರು.

ದಕ್ಷಿಣ ದಿಲ್ಲಿಯ ಮೋತಿ ಬಾಗ್‌ನ ಸರ್ವೋದಯ ಕೋ-ಎಜುಕೇಶನ್ ಸೀನಿಯರ್ ಸೆಕಂಡರಿ ಶಾಲೆಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮೆಲಾನಿಯಾ ಟ್ರಂಪ್ ಅವರಿಗೆ ತಿಲಕ ಇರಿಸಿ ಸ್ವಾಗತಿಸಿದರು. ಈಶಾನ್ಯ ದಿಲ್ಲಿಯ ವಿವಿಧ ಭಾಗಗಳಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳು ಹಾಗೂ ಬೆಂಬಲಿಗರ ನಡುವೆ ಘರ್ಷಣೆ ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳುತ್ತಿರುವುದರ ನಡುವೆ ಮೆಲಾನಿಯಾ ಟ್ರಂಪ್ ದಿಲ್ಲಿಯ ಈ ಸರಕಾರಿ ಶಾಲೆಗೆ ಭೇಟಿ ನೀಡಿದ್ದಾರೆ.

ಮಕ್ಕಳೊಂದಿಗೆ ಬೆರೆತ ಮೆಲಾನಿಯಾ ಟ್ರಂಪ್, ಮನಪೂರ್ವಕವಾಗಿ ಕತೆ ಹೇಳುವುದು ಹಾಗೂ ಪ್ರಕೃತಿಯೊಂದಿಗೆ ಬೆರೆಯುವುದರೊಂದಿಗೆ ವಿದ್ಯಾರ್ಥಿಗಳ ಪ್ರತಿದಿನ ಆರಂಭವಾಗುವುದು ನಿಜಕ್ಕೂ ಸ್ಪೂರ್ತಿದಾಯಕ ಅಂಶ. ಇದಕ್ಕಿಂತ ಉತ್ತಮ ರೀತಿಯಲ್ಲಿ ದಿನವನ್ನು ಆರಂಭಿಸುವ ಬಗ್ಗೆ ನನಗೆ ಚಿಂತಿಸಲು ಅಸಾಧ್ಯ ಎಂದರು. ಜೀವನಪೂರ್ತಿ ಪರಸ್ಪರ ಸ್ನೇಹದಿಂದಿರಿ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು ಹಾಗೂ ಮಕ್ಕಳಿಗೆ ಉತ್ತಮ ವೌಲ್ಯವನ್ನು ಕಲಿಸುತ್ತಿರುವುದಕ್ಕೆ ಅಧ್ಯಾಪಕರಿಗೆ ವಂದನೆ ಸಲ್ಲಿಸಿದರು.

ಶಾಲೆಯಲ್ಲಿ ಒಂದು ಗಂಟೆಗಳನ್ನು ವ್ಯಯಿಸುವ ಮೂಲಕ ಮೆಲಾನಿಯ ‘ಸಂತಸದ ಪಠ್ಯ’ದ ಭಾಗವಾಗಿ ನಡೆದ ವಿವಿಧ ಚಟುವಟಿಕೆಗಳಿಗೆ ಸಾಕ್ಷಿಯಾದರು ಹಾಗೂ ವಿದ್ಯಾರ್ಥಿಗಳು, ಅದ್ಯಾಪಕರೊಂದಿಗೆ ಸಂವಹನ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News