ದಿಲ್ಲಿ ಪೊಲೀಸರನ್ನು ನಂಬಿ: ದೋವಲ್

Update: 2020-02-26 10:38 GMT

ಹೊಸದಿಲ್ಲಿ: ದಿಲ್ಲಿಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಯಾರೂ ಭಯಪಡುವ ಅಗತ್ಯವಿಲ್ಲ ಎಂದು ರವಿವಾರದಿಂದ ಹಿಂಸೆಯಿಂದ ನಲುಗಿರುವ ರಾಜಧಾನಿ ದಿಲ್ಲಿಯ ಕೆಲ ಭಾಗಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.

ಕೆಲ ಹಿಂಸಾಪೀಡಿತ ಸ್ಥಳಗಳಿಗೆ ಮಂಗಳವಾರ ತಡರಾತ್ರಿ ಭೇಟಿ ನೀಡಿದ ದೋವಲ್, "ಕಾನೂನನ್ನು ಪಾಲಿಸುವ ಯಾವುದೇ ನಾಗರಿಕನಿಗೆ ಯಾರೂ ಯಾವುದೇ ರೀತಿಯಲ್ಲಿ ತೊಂದರೆಯುಂಟು ಮಾಡುವುದಿಲ್ಲ'' ಎಂದರು.

"ಜನರು ದಿಲ್ಲಿ ಪೊಲೀಸರ ಸಾಮರ್ಥ್ಯ ಮತ್ತು ಉದ್ದೇಶಗಳನ್ನು ಶಂಕಿಸುತ್ತಿದ್ದಾರೆ. ಇದನ್ನು  ಸರಿಪಡಿಸಬೇಕಿದೆ. ಪೊಲೀಸರ ಮೇಲೆ ಜನರು ವಿಶ್ವಾಸವಿರಿಸಬೇಕು'' ಎಂದು ದೋವಲ್ ಹೇಳಿದರು.  ದಿಲ್ಲಿ ಪೊಲೀಸರು ಹಿಂಸೆಯನ್ನು ಹತ್ತಿಕ್ಕಲು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳ ಹಿನ್ನೆಲೆಯಲ್ಲಿ ದೋವಲ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ಸೀಲಂಪುರ್, ಜಾಫ್ರಬಾದ್, ಮೌಜ್‍ ಪುರ್ ಹಾಗೂ ಗೋಕುಲ್‍ ಪುರಿ ಚೌಕ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ದೋವಲ್ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ್ದಾರೆ.

"ನಾಗರಿಕರಲ್ಲಿ ಸ್ವಲ್ಪ ಮಟ್ಟಿನ ಅಭದ್ರತೆಯ ಭಾವನೆಯಿದೆ. ಎಲ್ಲಾ ಸಮುದಾಯಗಳ ಮನಸ್ಸಿನಲ್ಲಿರುವ ಎಲ್ಲಾ ಭಯವನ್ನೂ ದೂರಗೊಳಿಸಲು ಬಯಸುತ್ತೇವೆ'' ಎಂದು ಹೇಳಿದ ದೋವಲ್  ಹಿಂಸೆಯಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಯಾರೂ ದಿಲ್ಲಿಯ ರಸ್ತೆಗಳಲ್ಲಿ ಬಂದೂಕು ಹಿಡಿದುಕೊಂಡು ಸಂಚರಿಸಲು ಸಾಧ್ಯವಿಲ್ಲ ಎಂದರು.

ಸೇನೆ ನಿಯೋಜಿಸಿ : ಕೇಜ್ರಿವಾಲ್

ಅತ್ತ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ ``ಸೇನೆಯನ್ನು ನಿಯೋಜಿಸಬೇಕು ಹಾಗೂ ಹಿಂಸಾಪೀಡಿತ ಪ್ರದೇಶಗಳಲ್ಲಿ ಕರ್ಫ್ಯೂ ಹೇರಬೇಕು, ತಮ್ಮ ಪ್ರಯತ್ನಗಳ ಹೊರತಾಗಿಯೂ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ವಿಫಲರಾಗಿದ್ದಾರೆ'' ಎಂದಿದ್ದಾರೆ. ಈ ಕುರಿತಂತೆ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.

ಹಿಂಸಾಪೀಡಿತ ಪ್ರದೇಶಗಳಲ್ಲಿ ಸಾಕಷ್ಟು ಪೊಲೀಸ್ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಿರುವುದರಿಂದ ಸೇನೆಯ ನಿಯೋಜನೆ ಅಗತ್ಯವಿಲ್ಲ ಎಂದು ಗೃಹ ಸಚಿವಾಲಯ ಈ ಹಿಂದೆ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News