ದಿಲ್ಲಿಯಲ್ಲಿ ಮನೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳು: 85 ವರ್ಷದ ವೃದ್ಧೆ ಜೀವಂತದಹನ

Update: 2020-02-26 15:16 GMT
Photo: scroll.in

ಫೆಬ್ರವರಿ 25ರಂದು ಮುಹಮ್ಮದ್ ಸಯೀದ್ ಸಲ್ಮಾನಿ ಮನೆಗೆ ಹಾಲು ತರಲೆಂದು ಹೊರಹೋಗಿದ್ದರು. ಈ ಸಂದರ್ಭ ಅವರಿಗೆ ಪುತ್ರನಿಂದ ಕರೆ ಬಂದಿತ್ತು. ಸುಮಾರು 100 ಜನರಿದ್ದ ದುಷ್ಕರ್ಮಿಗಳ ತಮ್ಮ ಬೀದಿಗೆ ನುಗ್ಗಿದ್ದ ಅವರೆಲ್ಲರೂ ಶಸ್ತ್ರಸಜ್ಜಿತರಾಗಿದ್ದಾರೆ ಎಂದು ಪುತ್ರ ತಿಳಿಸಿದ್ದ. ಬೀದಿಗೆ ನುಗ್ಗಿದ್ದ ದುಷ್ಕರ್ಮಿಗಳು ಅಂಗಡಿಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ್ದರು. ಇದೇ ಸಂದರ್ಭ ಸಲ್ಮಾನಿಯವರ ಮನೆಗೂ ಬೆಂಕಿ ಹಚ್ಚಲಾಗಿತ್ತು.

ಮಾಹಿತಿ ಸಿಕ್ಕ ತಕ್ಷಣ ಸಲ್ಮಾನಿ ಮನೆಯ ಕಡೆಗೆ ಧಾವಿಸಿ ಬಂದರು. ಆಗ ಪಕ್ಕದ ಬೀದಿಯ ಜನರು ಅವರನ್ನು ತಡೆದರು. "ಪರಿಸ್ಥಿತಿ ತುಂಬಾ ಅಪಾಯಕಾರಿ ಎಂದು ಅವರು ನನಗೆ ಹೇಳಿದರು. ನನ್ನನ್ನು ಕೊಲ್ಲಬಹುದು ಎಂದರು. ನಾನು ಅಲ್ಲಿ ಕಾಯಲೇಬೇಕಾಯಿತು. ಏಕೆಂದರೆ ಎಲ್ಲವೂ ನಡೆದು ಹೋಗಿತ್ತು" ಎಂದು ಸಲ್ಮಾನಿ ವಿವರಿಸುತ್ತಾರೆ.

ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ಚಿದಾಗ ಕುಟುಂಬಸ್ಥರು ಹೇಗೋ ಪಾರಾದರೂ ಅವರ ತಾಯಿ 85 ವರ್ಷದ ಅಕ್ಬರಿಯವರು ಜೀವಂತ ದಹನವಾಗಿ ಮೃತಪಟ್ಟರು. ಇಡೀ ಕಟ್ಟಡವೇ ಹೊತ್ತಿ ಉರಿಯಿತು. ಮನೆಯ 2 ಮಹಡಿಗಳಲ್ಲಿದ್ದ ಕುಟುಂಬದ ಟೈಲರಿಂಗ್ ವರ್ಕ್ ಶಾಪ್ ಸುಟ್ಟು ಕರಕಲಾಯಿತು. ಈ ದುಷ್ಕರ್ಮಿಗಳ ತಂಡ 8 ಲಕ್ಷ ರೂ. ಮತ್ತು ಕುಟುಂಬಸ್ಥರ ಆಭರಣಗಳನ್ನೆಲ್ಲಾ ಲೂಟಿಗೈದಿದೆ ಎಂದು ಸಲ್ಮಾನಿ ಆರೋಪಿಸುತ್ತಾರೆ. "ನನ್ನಲ್ಲಿ ಏನೂ ಇಲ್ಲ. ನಾನು ಸೊನ್ನೆಯಾಗಿದ್ದೇನೆ" ಎಂದವರು ಹೇಳುತ್ತಾರೆ.

ಅಕ್ಬರಿಯವರ ಮೃತದೇಹ ಜಿಟಿಬಿ ಆಸ್ಪತ್ರೆಯಲ್ಲಿದ್ದು, ಗುರುವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ತಿಳಿಸಲಾಗಿದೆ. ಖಜುರಿ ಖಾಸ್ ನ ಗಮ್ರಿಯಲ್ಲಿ ಸಲ್ಮಾನಿಯವರ ಮನೆಯಿದೆ. ಈ ಪ್ರದೇಶವು ಕೂಡ ಹಿಂಸಾಚಾರದಿಂದ ನಲುಗಿದ ಪ್ರದೇಶಗಳಲ್ಲೊಂದು. ಸೋಮವಾರದಿಂದ ಇಲ್ಲಿಗೆ ಆಗಮಿಸತೊಡಗಿದ ದುಷ್ಕರ್ಮಿಗಳು 'ಜೈಶ್ರೀರಾಮ್' ಘೋಷಣೆಗಳನ್ನು ಕೂಗುತ್ತಾ ಮುಸ್ಲಿಮರ ಮೇಲೆ ಕಲ್ಲು, ದೊಣ್ಣೆಗಳಿಂದ ದಾಳಿ ನಡೆಸತೊಡಗಿದರು ಎಂದು ಆರೋಪಿಸಲಾಗಿದೆ.

ಈ ಗುಂಪುಗಳ ಬೆದರಿಕೆ ಹೆಚ್ಚುತ್ತಾ ಹೋದಂತೆ ಇಲ್ಲಿನ ಎಲ್ಲಾ ಮುಸ್ಲಿಮರು ಅಗತ್ಯ ಸಾಮಗ್ರಿಗಳೊಂದಿಗೆ ಸಂಬಂಧಿಕರು ಮತ್ತು ಗೆಳೆಯರ ಮನೆಗಳಿಗೆ ತೆರಳಿದ್ದಾರೆ.

ಕೃಪೆ: scroll.in

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News