ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರುಣ್ ಮಿಶ್ರಾರಿಂದ ಮೋದಿ ಪ್ರಶಂಸೆ: ಭಾರತೀಯ ನ್ಯಾಯವಾದಿಗಳ ಸಂಘ ಕಳವಳ

Update: 2020-02-26 17:07 GMT

ಹೊಸದಿಲ್ಲಿ,ಡಿ.26: ಸುಪ್ರೀಂಕೋರ್ಟ್‌ನ ನ್ಯಾಯಾಧೀಶ ಅರುಣ್ ಮಿಶ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಕುರಿತು ಸಂಯಮಮೀರಿದ ಪ್ರಶಂಸೆ ಹಾಗೂ ಮೆಚ್ಚುಗೆಯ ಪದಗಳನ್ನು ಬಳಸಿರುವುದಕ್ಕೆ ಭಾರತೀಯ ನ್ಯಾಯವಾದಿಗಳ ಸಂಘ ಕಳವಳ ಹಾಗೂ ಅಸಮಾಧಾನ ವ್ಯಕ್ತಪಡಿಸಿದೆ.

 ಸರಕಾರದ ಕಾರ್ಯನಿರ್ವಾಹಕ ವಿಭಾಗದಿಂದ ವಿವೇಚನಾಯುಕ್ತವಾದ ಹಾಗೂ ಗೌರವಾನ್ವಿತ ಅಂತರವನ್ನು ಕಾಪಾಡಿಕೊಳ್ಳುವುದು ನ್ಯಾಯವಾದಿಗಳ ಮೂಲಭೂತ ಬಾಧ್ಯತೆಯಾಗಿದೆಯೆಂದು ಅದು ಹೇಳಿದೆ.

ಸಾಂವಿಧಾನಿಕ ತತ್ವಗಳನ್ನು ಹಾಗೂ ಕಾನೂನಿನ ಪ್ರಭುತ್ವವನ್ನು ಪರಮೋನ್ನತ ಮಟ್ಟದಲ್ಲಿ ಎತ್ತಿಹಿಡಿಯುವುದರ ಜೊತೆಗೆ ಸರಕಾರದ ಕಾರ್ಯನಿರ್ವಾಹಕ ಹುದ್ದೆಯ ವಿರುದ್ಧದ ಪ್ರಕರಣಗಳನ್ನು ನ್ಯಾಯಾಧೀಶರಾಗಿ ತೀರ್ಮಾನಿಸುವ ವಿಚಾದಲ್ಲಿ ಸಾರ್ವಜನಿಕರಿಗಿರುವ ವಿಶ್ವಾಸ ಕುಂದುವಂತೆ ಮಾಡಿದೆಯೆಂದು ಬಿಎಐ ಅಧ್ಯಕ್ಷ ಲಲಿತ್ ಭಾಸಿನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಾಧೀಶ ಅರುಣ್ ಮಿಶ್ರಾ ಅವರು ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ನ್ಯಾಯಾಂಗ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಂದರ್ಭ ಮಾಡಿದ್ದ ವಂದನಾ ಭಾಷಣದಲ್ಲಿ ಮೋದಿಯವರ ಗುಣಗಾನ ಮಾಡಿದ್ದುದು ವಿವಾದಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News