ವಿಶ್ವಸಂಸ್ಥೆ ನ್ಯಾಯಾಲಯದಲ್ಲಿ ರೊಹಿಂಗ್ಯಾ ಪರ ವಾದಿಸಲು ಅಮಲ್ ಕ್ಲೂನಿ ನೇಮಿಸಿದ ಮಾಲ್ದೀವ್ಸ್

Update: 2020-02-26 17:12 GMT

ಕೊಲಂಬೊ (ಶ್ರೀಲಂಕಾ), ಫೆ. 26: ಮ್ಯಾನ್ಮಾರ್‌ನಲ್ಲಿ ದೌರ್ಜನ್ಯಕ್ಕೊಳಗಾಗಿರುವ ರೊಹಿಂಗ್ಯಾ ಮುಸ್ಲಿಮರಿಗೆ ನ್ಯಾಯ ಕೋರಿ ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯಲ್ಲಿ ತನ್ನನ್ನು ಪ್ರತಿನಿಧಿಸಲು ಮಾಲ್ದೀವ್ಸ್ ಖ್ಯಾತ ಮಾನವಹಕ್ಕುಗಳ ವಕೀಲೆ ಅಮಲ್ ಕ್ಲೂನಿಯವರನ್ನು ನೇಮಿಸಿದೆ.

ಮ್ಯಾನ್ಮಾರ್‌ನಲ್ಲಿ 2017ರಲ್ಲಿ ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರ ವಿರುದ್ಧ ಸೇನೆ ನಡೆಸಿದ ದಮನ ಕಾರ್ಯಾಚರಣೆಯಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅದೇ ಸಂದರ್ಭದಲ್ಲಿ ಸೇನೆಯ ಚಿತ್ರಹಿಂಸೆಗೆ ಹೆದರಿ ಸುಮಾರು 7,40,000 ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಮ್ಯಾನ್ಮಾರ್‌ನಲ್ಲಿ ನಡೆದ ಸೇನಾ ದಮನ ಕಾರ್ಯಾಚರಣೆಯ ವಿರುದ್ಧ ಆಫ್ರಿಕದ ದೇಶ ಗಾಂಬಿಯ ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದೆ. ಈ ಮೊಕದ್ದಮೆಯಲ್ಲಿ ತಾನೂ ಕೈಜೋಡಿಸುವುದಾಗಿ ಮಾಲ್ದೀವ್ಸ್ ಸರಕಾರ ಬುಧವಾರ ಘೋಷಿಸಿದೆ.

ಸೇನಾ ದಮನ ಕಾರ್ಯಾಚರಣೆಯ ಬಗ್ಗೆ ವಿಚಾರಣೆ ನಡೆಯುತ್ತಿರುವಂತೆಯೇ, ರೊಹಿಂಗ್ಯಾ ಮುಸ್ಲಿಮರ ಜನಾಂಗೀಯ ಹತ್ಯೆಯನ್ನು ತಡೆಯಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಬೌದ್ಧ ಬಹುಸಂಖ್ಯಾತ ಮ್ಯಾನ್ಮಾರ್‌ಗೆ ಅಂತರ್‌ರಾಷ್ಟ್ರೀಯ ನ್ಯಾಯಾಲಯವು ಕಳೆದ ತಿಂಗಳು ಸರ್ವಾನುಮತದ ತೀರ್ಪಿನಲ್ಲಿ ಆದೇಶಿಸಿದೆ. ಮೊಕದ್ದಮೆಯ ಪೂರ್ಣ ಪ್ರಮಾಣದ ವಿಚಾರಣೆ ಪೂರ್ಣಗೊಳ್ಳಲು ಹಲವು ವರ್ಷಗಳೇ ಬೇಕಾಗಬಹುದು ಎನ್ನಲಾಗಿದೆ.

ಇದಕ್ಕೂ ಮೊದಲು ಮಾಲ್ದೀವ್ಸ್‌ನ ಮಾಜಿ ಅಧ್ಯಕ್ಷ ಮುಹಮ್ಮದ್ ನಶೀದ್ ಪರವಾಗಿ ಅಮಲ್ ಕ್ಲೂನಿ ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ಯಶಸ್ವಿಯಾಗಿ ವಾದಿಸಿದ್ದರು ಹಾಗೂ 2015ರಲ್ಲಿ ಅವರಿಗೆ ನೀಡಲಾಗಿರುವ 13 ವರ್ಷಗಳ ಜೈಲು ಶಿಕ್ಷೆ ಕಾನೂನುಬಾಹಿರ ಎಂಬುದಾಗಿ ನ್ಯಾಯಾಲಯ ತೀರ್ಪು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News