ಪೂರ್ವ ಇಂಡೋನೇಶ್ಯದಲ್ಲಿ ಪ್ರಬಲ ಭೂಕಂಪ

Update: 2020-02-26 17:24 GMT

ಜಕಾರ್ತ (ಇಂಡೋನೇಶ್ಯ), ಫೆ. 26: ಪೂರ್ವ ಇಂಡೋನೇಶ್ಯದಲ್ಲಿ ಬುಧವಾರ ರಿಕ್ಟರ್ ಮಾಪಕದಲ್ಲಿ 5.9ರ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯಾಲಜಿಕಲ್ ಸರ್ವೆ (ಯುಎಸ್‌ಜಿಎಸ್) ಹೇಳಿದೆ. ಆದರೆ, ಸುನಾಮಿ ಎಚ್ಚರಿಕೆಯನ್ನು ಹೊರಡಿಸಲಾಗಿಲ್ಲ.

ಇಂಡೋನೇಶ್ಯ ದ್ವೀಪ ಸಮೂಹಕ್ಕೆ ಸೇರಿದ ಮಲುಕು ಪ್ರಾಂತದ ತುವಾಲ್ ನಗರದ ನೈರುತ್ಯಕ್ಕೆ ಸುಮಾರು 280 ಕಿ.ಮೀ. ದೂರದ ಸಮುದ್ರದಲ್ಲಿ ಸುಮಾರು 61 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ.

ಜಕಾರ್ತದಲ್ಲಿ ಭಾರೀ ಮಳೆ, ಪ್ರವಾಹ

ಅದೇ ವೇಳೆ, ಇಂಡೋನೇಶ್ಯ ರಾಜಧಾನಿ ಜಕಾರ್ತದಲ್ಲಿ ಭಾರೀ ಮಳೆ ಸುರಿದಿದ್ದು, ನಗರದ ಹಲವಾರು ಉಪನಗರಗಳಲ್ಲಿ ಪ್ರವಾಹ ತಲೆದೋರಿದೆ. ಇದರಿಂದಾಗಿ ನಗರದ ಹಲವು ಭಾಗಗಳಲ್ಲಿ ಜನಜೀವನ ಸ್ತಬ್ಧವಾಗಿದೆ.

ಆಗ್ನೇಯ ಏಶ್ಯದಲ್ಲಿರುವ ಇಂಡೋನೇಶ್ಯವು ಜಗತ್ತಿನ ಅತಿ ಹೆಚ್ಚು ಭೂಕಂಪ ಪೀಡಿತ ದೇಶಗಳ ಪೈಕಿ ಒಂದಾಗಿದೆ.

2018ರಲ್ಲಿ ಇಂಡೋನೇಶ್ಯದ ಸುಲವೆಸಿ ದ್ವೀಪದ ಪಲು ಎಂಬಲ್ಲಿ ಸಂಭವಿಸಿದ 7.5ರ ತೀವ್ರತೆಯ ಭೂಕಂಪ ಹಾಗೂ ಬಳಿಕ ಅಪ್ಪಳಿಸಿದ ಸುನಾಮಿಯಲ್ಲಿ 4,300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News