ಭಾರತದಲ್ಲಿ ‘ವಿಕಿಪೀಡಿಯಾ’ ಮುಚ್ಚುವ ಸಾಧ್ಯತೆ: ಕಾರಣವೇನು ಗೊತ್ತಾ ?

Update: 2020-02-26 17:24 GMT

ಹೊಸದಿಲ್ಲಿ, ಫೆ.26: ಭಾರತದಲ್ಲಿ ಪ್ರಸ್ತಾವಿಸಲಾಗಿರುವ ದತ್ತಾಂಶ ಸುರಕ್ಷಾ ಮಸೂದೆ ಹಾಗೂ ಇಂಟರ್‌ನೆಟ್ ಮಧ್ಯವರ್ತಿ ಹೊಣೆಗಾರಿಕೆ ನಿಯಮಗಳಿಂದ ವಿವಿಧ ಇಂಟರ್‌ನೆಟ್ ಕಂಪೆನಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ವಿಕಿಪೀಡಿಯಾ ಪ್ರತಿಷ್ಟಾನ ಹೇಳಿದೆ.

ಗೂಗಲ್, ಫೇಸ್‌ಬುಕ್, ಟ್ವಿಟರ್, ಟಿಕ್‌ಟಾಕ್‌ನಂತಹ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿರುವ ವಿಕಿಪೀಡಿಯಾವು ಆನ್‌ಲೈನ್‌ನಲ್ಲಿ ವಿವಿಧ ವಿಷಯಗಳ ಕುರಿತ ಮಾಹಿತಿಯನ್ನು ಒದಗಿಸುತ್ತದೆ. ಆದರೆ ಈಗ ಭಾರತ ಸರಕಾರ ಪ್ರಸ್ತಾವಿಸಿರುವ ಬದಲಾವಣೆಯಿಂದ ಭಾರತದಲ್ಲಿನ ತನ್ನ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದೆ.

ಮೊದಲನೆಯದಾಗಿ, ಹೊಸ ನಿಯಮದಂತೆ ವಿಕಿಪೀಡಿಯಾ ಸಂಸ್ಥೆ ಭಾರತದಲ್ಲಿ ಸ್ಥಳೀಯ ಘಟಕವನ್ನು ಆರಂಭಿಸಬೇಕು. ಇಂಟರ್‌ನೆಟ್ ಮಧ್ಯವರ್ತಿ ಹೊಣೆಗಾರಿಕೆ ನಿಯಮದ ಪ್ರಕಾರ, ಭಾರತದಲ್ಲಿ 50 ಲಕ್ಷಕ್ಕೂ ಹೆಚ್ಚು ಬಳಕೆದಾರರಿರುವ ಸಂಸ್ಥೆಯು ಭಾರತದಲ್ಲಿ ಶಾಶ್ವತ ನೋಂದಾಯಿತ ಕಚೇರಿ ಮತ್ತು ವಿಳಾಸವನ್ನು ಹೊಂದಿದ ಘಟಕವನ್ನು ಹೊಂದಿರಬೇಕು. ಅಲ್ಲದೆ, ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಯಾವುದೇ ವಿಷಯವನ್ನು ಫಿಲ್ಟರ್(ಶೋಧಿಸಿ) ಮಾಡಬೇಕು ಎಂದು ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ. ನಿರ್ಧಿಷ್ಟ ವಿಷಯವನ್ನು 24 ಗಂಟೆಯೊಳಗೆ ತೆಗೆದುಹಾಕುವಂತೆ ಮತ್ತು ಸೈಬರ್‌ ಭದ್ರತೆಯ ನಿಟ್ಟಿನಲ್ಲಿ ಅಗತ್ಯವಿರುವ ಮಾಹಿತಿಯನ್ನು 72 ಗಂಟೆಯೊಳಗೆ ಒದಗಿಸುವಂತೆ ಸೂಚಿಸಲು ಸರಕಾರಕ್ಕೆ ಅವಕಾಶವಿದೆ. ಅಂದರೆ ವಿಕಿಪೀಡಿಯಾದಲ್ಲಿ ಒದಗಿಸಲಾಗುವ ಯಾವುದೇ ಮಾಹಿತಿಯನ್ನು ನಿಯಂತ್ರಿಸಲು ಮತ್ತು ಅಗತ್ಯಬಿದ್ದಾಗ ಮಾಹಿತಿ ಒದಗಿಸಲು ವಿಕಿಪೀಡಿಯಾಕ್ಕೆ ಸರಕಾರ ಸೂಚಿಸಬಹುದಾಗಿದೆ.

ಇಂಟರ್‌ನೆಟ್ ಮಧ್ಯವರ್ತಿ ಹೊಣೆಗಾರಿಕೆ ನಿಯಮದ ಕುರಿತು ವಿಕಿಪೀಡಿಯಾ, ಮೊಝಿಲ್ಲಾ, ಗಿಟ್‌ಹಗ್, ಕ್ಲೌಡ್‌ಫ್ಲಾರ್ ಸಂಸ್ಥೆಗಳು ಸರಕಾರಕ್ಕೆ ಬಹಿರಂಗ ಪತ್ರ ಬರೆದಿವೆ. ಈ ನಿಯಮ ಜಾರಿಗೆ ಬಂದರೆ ಭಾರತದಲ್ಲಿ ಕಾರ್ಯನಿರ್ವಹಿಸಲು ಸಮಸ್ಯೆಯಾಗುತ್ತದೆ ಎಂದು ವಿಕಿಮೀಡಿಯಾದ ಕಾನೂನು ವಿಭಾಗದ ನಿರ್ದೇಶಕ ಸ್ಟೀಫನ್ ಲಪೋರ್ಟೆ ಹೇಳಿದ್ದಾರೆ. ಸಂಸ್ಥೆಯು ಭಾರತದಲ್ಲಿನ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ನಾವು ಬರೆದಿರುವ ಬಹಿರಂಗ ಪತ್ರವನ್ನು ಭಾರತ ಸರಕಾರ ಗಮನಿಸಿದೆ ಎಂಬುದು ಭಾರತ ಸರಕಾರದ ಇತ್ತೀಚಿನ ಹೇಳಿಕೆಯಿಂದ ದೃಢಪಟ್ಟಿದೆ. ಪರಿಷ್ಕೃತ ನಿಯಮವು ವಿಕಿಪೀಡಿಯಾದಂತಹ ಲಾಭಾಪೇಕ್ಷೆಯಿಲ್ಲದ ಆನ್‌ಲೈನ್ ವೇದಿಕೆಯ ಕಾರ್ಯನಿರ್ವಹಣೆಗೆ ಯಾವುದೇ ತೊಡಕಾಗದು ಎಂಬ ವಿಶ್ವಾಸವಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News