ಚೀನಾ: ಕೊರೋನವೈರಸ್ ಸಾವಿನ ಸಂಖ್ಯೆ 2,715ಕ್ಕೆ

Update: 2020-02-26 17:58 GMT

ಬೀಜಿಂಗ್ (ಚೀನಾ), ಫೆ. 26: ಚೀನಾದಲ್ಲಿ ಕೊರೋನವೈರಸ್‌ನಿಂದಾಗಿ ಕಳೆದ 24 ಗಂಟೆಗಳ ಅವಧಿಯಲ್ಲಿ 52 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ. ಇದು ಮೂರು ವಾರಗಳಿಗೂ ಅಧಿಕ ಅವಧಿಯಲ್ಲಿ ಚೀನಾದಲ್ಲಿ ಒಂದು ದಿನದಲ್ಲಿ ವರದಿಯಾಗಿರುವ ಅತಿ ಕಡಿಮೆ ಸಾವಿನ ಸಂಖ್ಯೆಯಾಗಿದೆ.

ಇದರೊಂದಿಗೆ ಚೀನಾದಲ್ಲಿ ಈ ಭೀಕರ ರೋಗದಿಂದಾಗಿ ಮೃತಪಟ್ಟವರ ಸಂಖ್ಯೆ 2,715ಕ್ಕೆ ಏರಿದೆ.

ಹೊಸದಾಗಿ ಸಂಭವಿಸಿದ ಎಲ್ಲ ಸಾವುಗಳು ಸೋಂಕಿನ ಕೇಂದ್ರ ಬಿಂದು ಹುಬೈ ಪ್ರಾಂತದಲ್ಲೇ ಸಂಭವಿಸಿದೆ.

ಇದೇ ಅವಧಿಯಲ್ಲಿ ಹೊಸದಾಗಿ 406 ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಪೈಕಿ 401 ಪ್ರಕರಣಗಳು ಹುಬೈ ಪ್ರಾಂತವೊಂದರಲ್ಲೇ ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಚೀನಾದಲ್ಲಿ ಹೊಸ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಯಾವುದೇ ಹೊಸ ಸೋಂಕುಗಳು ದೃಢಪಟ್ಟಿಲ್ಲ ಎಂಬುದಾಗಿ ಇತ್ತೀಚಿನ ದಿನಗಳಲ್ಲಿ ಹಲವು ರಾಜ್ಯಗಳು ವರದಿ ಮಾಡಿವೆ.

 ಮಾರಕ ಸೋಂಕಿನ ಕೇಂದ್ರ ಬಿಂದುವಾಗಿರುವ ಹುಬೈಯಿಂದ ಹೊರಗೆ ಕೇವಲ 5 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದು ಒಂದು ತಿಂಗಳಿಗೂ ಹೆಚ್ಚಿನ ಅವಧಿಯಲ್ಲಿ ಅತ್ಯಂತ ಕನಿಷ್ಠವಾಗಿದೆ. ಚೀನಾದಲ್ಲಿ ಕೊರೋನವೈರಸ್ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 78,000ವನ್ನು ಮೀರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News