ದಿಲ್ಲಿ ಹಿಂಸಾಚಾರ: 11 ದಿನಗಳ ಹಿಂದೆ ವಿವಾಹವಾದ ಯುವಕ ಗುಂಡಿಗೆ ಬಲಿ

Update: 2020-02-27 05:46 GMT

ಹೊಸದಿಲ್ಲಿ, ಫೆ. 26: ದಿಲ್ಲಿ ಹಿಂಸಾಚಾರದಲ್ಲಿ ಮೃತಪಟ್ಟ 27 ಮಂದಿಯಲ್ಲಿ 11 ದಿನಗಳ ಹಿಂದೆ ವಿವಾಹವಾದ ಇಲೆಕ್ಟ್ರೀಶಿಯನ್ ಓರ್ವರು ಕೂಡ ಸೇರಿದ್ದಾರೆ. ಮುಸ್ತಫಾಬಾದ್‌ನಲ್ಲಿ ವಾಸಿಸುತ್ತಿರುವ 22 ವರ್ಷದ ಅಶ್ಫಾಕ್ ಹುಸೈನ್ ಇಲೆಕ್ಟ್ರಾನಿಕ್ಸ್ ಉಪಕರಣ ದುರಸ್ಥಿಗೆಂದು ತೆರಳಿ ಹಿಂದಿರುಗುವ ಸಂದರ್ಭ ಗುಂಡು ತಾಗಿ ಮೃತಪಟ್ಟಿದ್ದಾರೆ ಎಂದು ಅವರ ಮಾವ ಶರೀಫುಲ್ ಹುಸೈನ್ ಹೇಳಿದ್ದಾರೆ.

ಮುಸ್ತಫಾಬಾದ್‌ನ ಬ್ರಿಜ್‌ಪುರಿಯಲ್ಲಿರುವ ಸೇತುವೆಯಲ್ಲಿ ಸಂಜೆ 5.30ಕ್ಕೆ ದಿಲ್ಲಿ ಪೊಲೀಸರು ಅಶ್ಫಾಕ್ ಹುಸೈನ್ ಮೇಲೆ ಮೂರು ಗುಂಡುಗಳನ್ನು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪೊಲೀಸರ ಗುಂಡು ತಾಗಿ ಗಂಭೀರ ಗಾಯಗೊಂಡಿದ್ದ ಅಶ್ಫಾಕ್ ಹುಸೈನ್ ಅವರನ್ನು ಸ್ಥಳೀಯರು ಮುಸ್ತಾಫಾಬಾದ್‌ನಲ್ಲಿರುವ ಆಸ್ಪತ್ರೆಗೆ ತಂದು ದಾಖಲಿಸಿದ್ದರು. ಅಶ್ಫಾಕ್ ಹುಸೈನ್‌ನನ್ನು ನೆರೆಯವರು ಗುರುತು ಹಿಡಿದ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಮಾವ ಶರೀಫುಲ್ ಹುಸೈನ್ ಆಸ್ಪತ್ರೆಗೆ ಧಾವಿಸುವ ಮೊದಲೇ ಅಸ್ಫಾಕ್ ಹುಸೈನ್ ಮೃತಪಟ್ಟಿದ್ದರು.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾನೂನು ಕ್ರಮ ಕೈಗೊಳ್ಳುವ ಉದ್ದೇಶವನ್ನು ಅಶ್ಫಾಕ್ ಹುಸೈನ್ ಕುಟುಂಬ ಹೊಂದಿದೆ ಎಂದು ಶರೀಫುಲ್ ಹುಸೈನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News