ದಿಲ್ಲಿ ಹಿಂಸಾಚಾರ: ಅಮಿತ್ ಶಾ ರಾಜೀನಾಮೆಗೆ ಸೋನಿಯಾ ಗಾಂಧಿ ಆಗ್ರಹ

Update: 2020-02-27 05:54 GMT

ಹೊಸದಿಲ್ಲಿ, ಫೆ. 25: ಈಶಾನ್ಯ ದಿಲ್ಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಕೇಂದ್ರ ಸರಕಾರ ಹಾಗೂ ದಿಲ್ಲಿ ಸರಕಾರವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸಹಜಸ್ಥಿತಿ ಮರು ಸ್ಥಾಪಿಸಲು ವಿಫಲರಾದ ಕೇಂದ್ರ ಸಚಿವ ಅಮಿತ್ ಶಾ ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯ ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಈ ಹಿಂಸಾಚಾರ ವ್ಯವಸ್ಥಿತ ವಿನ್ಯಾಸದ ಒಂದು ಭಾಗ. ಇದು ದಿಲ್ಲಿ ವಿಧಾನ ಸಭೆ ಚುನಾವಣೆ ಸಂದರ್ಭ ಕೂಡ ಕಂಡು ಬಂದಿತ್ತು. ಚುನಾವಣೆ ಸಂದರ್ಭ ಬಿಜೆಪಿ ನಾಯಕರು ತಮ್ಮ ಭಾಷಣಗಳ ಮೂಲಕ ದಿಲ್ಲಿ ಶಾಂತಿಯನ್ನು ಹಾಳುಗೆಡಹಿದ್ದರು ಎಂದರು. ಸೋನಿಯಾ ಗಾಂಧಿ ಅವರು ಕೇಂದ್ರ ಸರಕಾರದ ಮುಂದೆ 5 ಪ್ರಶ್ನೆಗಳನ್ನು ಇರಿಸಿದ್ದಾರೆ.

 1. ರವಿವಾರ ಗೃಹ ಸಚಿವರು ಎಲ್ಲಿದ್ದರು. ಹಾಗೂ ಅವರು ಏನು ಮಾಡುತ್ತಿದ್ದರು ? 2. ದಿಲ್ಲಿ ಮುಖ್ಯಮಂತ್ರಿ ಎಲ್ಲಿದ್ದರು ಹಾಗೂ ಅವರು ಏನು ಮಾಡುತ್ತಿದ್ದರು ? 3. ದಿಲ್ಲಿ ವಿಧಾನ ಸಭೆ ಚುನಾವಣೆ ಬಳಿಕ ಗುಪ್ತಚರ ಅಧಿಕಾರಿಗಳು ಹಂಚಿಕೊಂಡ ಮಾಹಿತಿ ಯಾವುದು ಹಾಗೂ ಇದರ ಬಗ್ಗೆ ತೆಗೆದುಕೊಳ್ಳಲಾದ ಕ್ರಮ ಏನು ? 4. ಪರಿಸ್ಥಿತಿ ಹದಗೆಡುತ್ತಿದೆ ಎಂಬುದು ಸ್ಪಷ್ಟವಾದರೂ ಉದ್ವಿಗ್ನ ಪ್ರದೇಶದಲ್ಲಿ ನಿಯೋಜಿಸಲಾದ ಪೊಲೀಸರ ಸಂಖ್ಯೆ ಎಷ್ಟು ? 5. ಪರಿಸ್ಥಿತಿ ಕೈ ಮೀರಿದರೂ ಅರೆ ಸೇನಾ ಪಡೆಯನ್ನು ನಿಯೋಜಿಸದೇ ಇರುವುದು ಯಾಕೆ ? ಎಂದು ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.

ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಎರಡು ಸರಕಾರಗಳ ವಿಫಲತೆ ಕಾರಣ ಎಂದು ಹೊಸದಿಲ್ಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಕೈಗೊಳ್ಳಲಾದ ತನ್ನ ನಿರ್ಣಯದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹೇಳಿದೆ. ಕಳೆದ 72 ಗಂಟೆಗಳಲ್ಲಿ ದಿಲ್ಲಿ ಪೊಲೀಸರು ಪಕ್ಷಪಾತಕ್ಕೆ ಒಳಗಾಗಿದ್ದರು. ಇದರಿಂದ ಇದುವರೆಗೆ ಹೆಡ್ ಕಾನ್ಸ್‌ಟೆಬಲ್ ಸಹಿತ 20 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ ನೂರಾರು ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ನಿರ್ಣಯ ಹೇಳಿದೆ. ಸೋನಿಯಾ ಗಾಂಧಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಿರಿಯ ನಾಯಕರಾದ ಎ.ಕೆ. ಆ್ಯಂಟನಿ, ಗುಲಾಂ ನಬಿ ಆಝಾದ್, ಪ್ರಿಯಾಂಕಾ ಗಾಂಧಿ ವಾದ್ರಾ, ಜ್ಯೋತಿರಾದಿತ್ಯ ಸಿಂಧ್ಯಾ ಹಾಗೂ ಇತರರು ಪಾಲ್ಗೊಂಡಿದ್ದರು. ವಿದೇಶದಲ್ಲಿ ಇರುವ ಕಾರಣಕ್ಕಾಗಿ ಪಕ್ಷದ ಮಾಜಿ ವರಿಷ್ಠ ರಾಹುಲ್ ಗಾಂಧಿ ಪಾಲ್ಗೊಂಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News