ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ದಿಢೀರ್ ವರ್ಗಾವಣೆ

Update: 2020-02-27 03:42 GMT

ಹೊಸದಿಲ್ಲಿ, ಫೆ.27: ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಮುರಳೀಧರ್ ಅವರನ್ನು ದಿಢೀರನೇ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆಯವರ ಜತೆ ಚರ್ಚಿಸಿದ ಬಳಿಕ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬುಧವಾರ ಈ ವರ್ಗಾವಣೆ ಆದೇಶ ಹೊರಡಿಸಿದ್ದಾರೆ. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ ಅಧಿಕಾರ ಸ್ವೀಕರಿಸುವಂತೆಯೂ ರಾಮನಾಥ್ ಕೋವಿಂದ್ ನಿರ್ದೇಶನ ನೀಡಿದ್ದಾಗಿ ಅಧಿಸೂಚನೆ ವಿವರಿಸಿದೆ.

ಫೆಬ್ರವರಿ 12ರಂದು ಸಭೆ ಸೇರಿದ್ದ ಸುಪ್ರೀಂಕೋರ್ಟ್ ಕೊಲಾಜಿಯಂ, ನ್ಯಾಯಮೂರ್ತಿ ಮುರಳೀಧರ್ ಅವರ ವರ್ಗಾವಣೆಗೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ವಿರೋಧಿಸುವ ಅವಿರೋಧ ನಿರ್ಣಯವನ್ನು ದಿಲ್ಲಿ ವಕೀಲರ ಸಂಘ ಆಂಗೀಕರಿಸಿತ್ತು. ಅತ್ಯುತ್ತಮ ನ್ಯಾಯಮೂರ್ತಿಗಳಲ್ಲೊಬ್ಬರಾದ ಮುರಳೀಧರನ್ ಅವರನ್ನು ವರ್ಗಾಯಿಸಿರುವ ಬಗ್ಗೆ ವಕೀಲರ ಸಂಘ ತೀವ್ರ ಆಘಾತ ವ್ಯಕ್ತಪಡಿಸಿದೆ. ವರ್ಗಾವಣೆ ಆದೇಶ ಹಿಂಪಡೆಯುವಂತೆ ಸಂಘ ಆಗ್ರಹಿಸಿದೆ.

ದಿಲ್ಲಿ ಹಿಂಸಾಚಾರದ ಬಗೆಗೆ ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ವಿರುದ್ಧ ದ್ವೇಷ ಭಾಷಣದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲು ಸೂಚಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬುಧವಾರ ನ್ಯಾಯಮೂರ್ತಿ ಮುರಳೀಧರ್ ಮತ್ತು ನ್ಯಾಯಮೂರ್ತಿ ತಲ್ವಂತ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠ ಮುಂದೂಡಿತ್ತು.

ಮುರಳೀಧರ್ ಹಾಗೂ ನ್ಯಾಯಮೂರ್ತಿ ಅನೂಪ್ ಜೆ.ಬಂಬಾನಿ ಅವರಿದ್ದ ವಿಭಾಗೀಯ ಪೀಠ ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಮಧ್ಯರಾತ್ರಿ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News