​ಹೊಸ ಕೊರೋನ ಪ್ರಕರಣ: ವಿಶ್ವದ ಇತರೆಡೆ ಚೀನಾಕ್ಕಿಂತ ಅಧಿಕ!

Update: 2020-02-27 03:55 GMT

ನ್ಯೂಯಾರ್ಕ್, ಫೆ.27: ಚೀನಾದಲ್ಲಿ 2,700 ಮಂದಿಯನ್ನು ಬಲಿಪಡೆದು 80 ಸಾವಿರಕ್ಕೂ ಅಧಿಕ ಮಂದಿಯನ್ನು ಬಾಧಿಸಿದ ಕೊರೋನ ಸೋಂಕು ಹರಡುವ ಪ್ರಮಾಣ ಇದೀಗ ಚೀನಾಗಿಂತ ವಿಶ್ವದ ಇತರ ದೇಶಗಳಲ್ಲಿ ಹೆಚ್ಚಿರುವುದು ಕಳವಳಕ್ಕೆ ಕಾರಣವಾಗಿದೆ. ಮೊದಲ ಬಾರಿಗೆ ಚೀನಾಕ್ಕಿಂತ ಅಧಿಕ ಸಂಖ್ಯೆಯ ಹೊಸ ಕೊರೋನ ಪ್ರಕರಣಗಳು ಇತರೆಡೆ ದೃಢಪಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.

ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಚೀನಾದ ವೂಹಾನ್ ಪಟ್ಟಣದ ಮಾಂಸ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಸೋಂಕು ಇದೀಗ ವಿಶ್ವದ ಇತರೆಡೆಗಳಲ್ಲಿ ಕೂಡಾ ವೇಗವಾಗಿ ಹರಡುತ್ತಿದೆ. ಚೀನಾದಲ್ಲಿ ನಿನ್ನೆ 411 ಹೊಸ ಪ್ರಕರಣಗಳು ದೃಢಪಟ್ಟಿದ್ದರೆ, ವಿಶ್ವದ ಇತರೆಡೆಗಳಲ್ಲಿ 427 ಪ್ರಕರಣಗಳು ಒಂದೇ ದಿನ ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಗೆಬ್ರಿಯೆಸಿಸ್ ಹೇಳಿದ್ದಾರೆ.

ವಿಶ್ವದ 33 ದೇಶಗಳಲ್ಲಿ ಒಟ್ಟು 80,988 ಮಂದಿಗೆ ಈ ಸೋಂಕು ತಗುಲಿದೆ. ಇಟಲಿಯಲ್ಲಿ ವ್ಯಾಪಕವಾಗಿ ಹಬ್ಬಿರುವ ಸೋಂಕು ಯೂರೋಪ್‌ನ ಇತರ ದೇಶಗಳಿಗೂ ಹರಡಿದ್ದು, ಬ್ರೆಝಿಲ್‌ನಲ್ಲಿ ಲ್ಯಾಟಿನ್ ಅಮೆರಿಕದ ಮೊಟ್ಟಮೊದಲ ಪ್ರಕರಣ ದಾಖಲಾಗಿದೆ. ಗ್ರೀಕ್ ದೇಶದಲ್ಲೂ ಮೊದಲ ಪ್ರಕರಣ ದಾಖಲಾಗಿದ್ದು, ಇತ್ತೀಚೆಗೆ ಉತ್ತರ ಇಟಲಿಗೆ ಪ್ರಯಾಣ ಬೆಳೆಸಿದ್ದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಟಲಿ ಜತೆ ಸಂಪರ್ಕ ಹೊಂದಿದ ಕ್ರೊವೇಷಿಯಾ, ಆಸ್ಟ್ರಿಯಾ ಮತ್ತು ಅಲ್ಜೀರಿಯಾದಲ್ಲೂ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಸ್ಪೇನ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಇಟಲಿಯ ಪ್ರವಾಸಿಯೊಬ್ಬರಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಹೋಟೆಲ್ ಮುಚ್ಚಲಾಗಿದೆ. ಇಟಲಿಯಲ್ಲಿ 374 ಪ್ರಕರಣ ವರದಿಯಾಗಿದ್ದು, 12 ಮಂದಿ ಮೃತಪಟ್ಟಿದ್ದಾರೆ. ದೇಶದ ದಕ್ಷಿಣ ಭಾಗಕ್ಕೂ ಸೋಂಕು ವ್ಯಾಪಿಸುತ್ತಿದೆ.

ಫ್ರಾನ್ಸ್‌ನಲ್ಲೂ ಹೊಸದಾಗಿ ನಾಲ್ಕು ಪ್ರಕರಣ ಬೆಳಕಿಗೆ ಬಂದಿದ್ದು, ದೇಶದಲ್ಲಿ ವೈರಸ್ ಸೋಂಕಿತರ ಸಂಖ್ಯೆ 17ಕ್ಕೇರಿದೆ. ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಜಾಗತಿಕ ಆರ್ಥಿಕ ಕುಸಿತಕ್ಕೆ ಕಾರಣವಾಗಲಿದೆ ಎಂಬ ಆತಂಕ ವ್ಯಾಪಾರಿ ಸಮೂಹದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News