ವಿಜ್ಞಾನ ಕೌತುಕ: ಆಮ್ಲಜನಕವಿಲ್ಲದೇ ಬದುಕುವ ಜೀವಿ ಪತ್ತೆ!

Update: 2020-02-27 04:03 GMT
ಸಾಂದರ್ಭಿಕ ಚಿತ್ರ

ಜೆರುಸಲೇಂ, ಫೆ.27: ಪ್ರಾಣಿಗಳು ಜೀವಂತವಾಗಿರಲು ಅಗತ್ಯವಾದ ಶಕ್ತಿಯನ್ನು ಆಮ್ಲಜನಕದ ಸಹಾಯವಿಲ್ಲದೇ ಉತ್ಪಾದಿಸಬಲ್ಲ ಜೀವಿಯೊಂದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದು ಪ್ರಾಣಿ ಜಗತ್ತಿನ ಬಗೆಗಿನ ವಿಜ್ಞಾನಿಗಳ ಕಲ್ಪನೆಯನ್ನೇ ಬದಲಿಸಬಲ್ಲ ಮಹತ್ವದ ಶೋಧನೆಯಾಗಿದೆ.

ಸಾಲ್ಮನ್ ತಳಿಯ ಮೀನಿನ ಮಾಂಸಖಂಡದಲ್ಲಿ ಜೀವಿಸುವ ಹೆನ್ನೆಗುಯಾ ಸಲ್ಮಿನಿಕೋಲಾ ಹೆಸರಿನ 10 ಕೋಶಗಳ ಪರಾವಲಂಬಿ ಜೀವಿ ಆಮ್ಲಜನಕವಿಲ್ಲದೇ ಬದುಕಬಲ್ಲದು ಎಂದು ಪಿಎನ್‌ಎಎಸ್ ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನದಲ್ಲಿ ಪ್ರತಿಪಾದಿಸಲಾಗಿದೆ.

ಜೆಲ್ಲಿ ಮೀನು ಮತ್ತು ಹವಳದ ಪ್ರಬೇಧದ ಜತೆ ಸಂಬಂಧ ಹೊಂದಿರುವ ಈ ಜೀವಿ ಉಸಿರಾಟ ಮತ್ತು ಆಮ್ಲಜನಕ ಸೇವನೆಯನ್ನು ತ್ಯಜಿಸಬಲ್ಲದು. ಪ್ರಾಣಿಗಳಲ್ಲಿ ಉಸಿರಾಟ ಅನಿವಾರ್ಯ ಎಂಬ ನಂಬಿಕೆ ಇದೆ. ಆದರೆ ಇದೀಗ ಅದು ನಿಜವಲ್ಲ ಎನ್ನುವುದು ಈ ಪ್ರಕರಣದಿಂದ ದೃಢಪಟ್ಟಿದೆ ಎಂದು ಇಸ್ರೇಲ್ ಟೆಲ್‌ಅವೀವ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ದೊರೋತಿ ಹಚಾನ್ ಪ್ರತಿಪಾದಿಸಿದ್ದಾರೆ.

"ನಮ್ಮ ಈ ಹೊಸ ಸಂಶೋಧನೆಯು, ಜೀವಿಗಳ ಉಗಮದ ಸಿದ್ಧಾಂತ ವಿಚಿತ್ರ ದಿಕ್ಕಿನಲ್ಲಿ ಸಾಗುವುದನ್ನು ತೋರಿಸುತ್ತದೆ. ಆಮ್ಲಜನಕದ ಉಸಿರಾಟವು ಶಕ್ತಿಯ ಮೂಲವಾಗಿದ್ದರೂ, ಇದನ್ನು ತ್ಯಜಿಸುವ ಜೀವಿಯೊಂದನ್ನು ನಾವು ಪತ್ತೆ ಮಾಡಿದ್ದೇವೆ" ಎಂದು ವಿವರಿಸಿದ್ದಾರೆ.

ಶಿಲೀಂದ್ರ, ಅಮೀಬಾ ಅಥವಾ ಇತರ ಜೀವಿಗಳು ಆಮ್ಲಜನಕ ಇಲ್ಲದ ಪರಿಸರದಲ್ಲಿ ಉಸಿರಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ ಎಂದು ಸಂಶೋಧಕರು ವಿವರಿಸಿದ್ದಾರೆ. ಇದೀಗ ಹೊಸ ಅಧ್ಯಯನದಿಂದ ತಿಳಿದುಬರುವಂತೆ ಪರಾವಲಂಬಿ ಜೀವಿ ಬಹುಶಃ ಈ ವಾತವರಣದಲ್ಲಿ ಬದುಕುವ ಹಿನ್ನೆಲೆಯಲ್ಲಿ ಪ್ರಾಣಿಗಳಿಗೂ ಈ ಸಾಧ್ಯತೆ ಇದೆ ಎಂದು ಪ್ರತಿಪಾದಿಸಿದ್ದಾರೆ. ಈ ಪರಾವಲಂಬಿ ಜೀವಿಯ ಉಸಿರಾಟರಹಿತ ಸ್ವಭಾವ ಆಕಸ್ಮಿಕ ಸಂಶೋಧನೆ ಎಂದು ಹೇಳಿದ್ದಾರೆ.

ಹೆನ್ನೆಗುಯಾ ಜೆನೋಮ್ ಜೋಡಿಸುವ ಹಂತದಲ್ಲಿ ಈ ಡಿಎನ್‌ಎ ಸರಣಿಯಲ್ಲಿ ಮೈಥೋಕಾಂಡ್ರಿಯಲ್ ಜೆನೋಮ್ ಇಲ್ಲ ಎನ್ನುವುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಮೈಥೋಕಾಂಡ್ರಿಯಲ್ ಜೆನೋಮ್ ಆಮ್ಲಜನಕವನ್ನು ಹೀರಿಕೊಂಡು ಶಕ್ತಿಯನ್ನು ಉತ್ಪಾದಿಸುವ ಶಕ್ತಿಕೇಂದ್ರವಾಗಿದೆ. ಈ ಜೆನೋಮ್ ಇಲ್ಲದಿರುವ ಕಾರಣದಿಂದ ಈ ಪ್ರಾಣಿ ಉಸಿರಾಡುವುದಿಲ್ಲ ಎನ್ನುವುದು ದೃಢಪಟ್ಟಿದೆ ಎಂದು ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News