​ಮದ್ಯ ತಯಾರಿಕಾ ಘಟಕದಲ್ಲಿ ಶೂಟೌಟ್: ಆರು ಮಂದಿ ಮೃತ್ಯು

Update: 2020-02-27 04:07 GMT

ವಾಷಿಂಗ್ಟನ್, ಫೆ.27: ಮದ್ಯ ತಯಾರಿಕಾ ಘಟಕದಲ್ಲಿ ಮಾಜಿ ಉದ್ಯೋಗಿಯೊಬ್ಬ ನಡೆಸಿದ ದಿಢೀರ್ ಗುಂಡಿನ ದಾಳಿಗೆ ಐದು ಮಂದಿ ಬಲಿಯಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

ಘಟನೆಯಲ್ಲಿ ಗನ್‌ಮನ್ ಸೇರಿದಂತೆ ಒಟ್ಟು ಆರು ಮಂದಿ ಜೀವ ಕಳೆದುಕೊಂಡಿದ್ದಾರೆ. ಕೊರೋನ ವೈರಸ್ ಬಗೆಗೆ ವಿವರಿಸಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮೊದಲು ಅಮೆರಿಕದಲ್ಲಿ ಬಂದೂಕಿನ ಹಿಂಸೆಯ ಸಾಂಕ್ರಾಮಿಕ ಹರಡುತ್ತಿರುವುದನ್ನು ಪ್ರಸ್ತಾಪಿಸಿದ ಅಧ್ಯಕ್ಷರು ಈ ಘಟನೆಯ ವಿವರ ನಿಡಿದರು.

"ವಿಕೃತ ಹಂತಕನೊಬ್ಬ ಮೊಲ್ಸನ್ ಕೂರ್ಸ್‌ ಬ್ರೇವಿಂಗ್ ಕಂಪನಿಯ ಘಟಕದಲ್ಲಿ ಗುಂಡಿನ ದಾಳಿ ನಡೆಸಿದಾಗ ಐದು ಮಂದಿ ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದು, ಕೆಲವರಿಗೆ ಮಾರಣಾಂತಿಕ ಗಾಯಗಳಾಗಿವೆ" ಎಂದು ಹೇಳಿದರು.

ಹಲವು ಸಾವುಗಳು ಸಂಭವಿಸಿದ್ದು, ಇದರಲ್ಲಿ ಹಂತಕ ಕೂಡಾ ಹತ್ಯೆಯಾಗಿದ್ದಾನೆ ಎಂದು ಮಿಲ್ವುಕಿ ಮೇಯರ್ ಟಾಮ್ ಬಾರೆಟ್ ಟ್ವೀಟ್ ಮಾಡಿದ್ದಾರೆ. "ಉದ್ಯೋಗಿಗಳ ಪಾಲಿಗೆ ಭಯಾನಕ, ಕರಾಳ ದಿನ" ಎಂದು ಬಣ್ಣಿಸಿರುವ ಅವರು, ಈ ಪ್ರದೇಶದಿಂದ ನಾಗರಿಕರು ದೂರ ಇರುವಂತೆ ಮನವಿ ಮಾಡಿದ್ದಾರೆ.

ಮತ್ತೊಬ್ಬ ಉದ್ಯೋಗಿಯ ನೇಮ್‌ಪ್ಲೇಟ್ ಕದ್ದು ಅದನ್ನು ಧರಿಸಿಕೊಂಡು ಬಂದೂಕಿನೊಂದಿಗೆ ಕಚೇರಿ ಆವರಣಕ್ಕೆ ಪ್ರವೇಶಿಸಿದ ಮಾಜಿ ಉದ್ಯೋಗಿ ಈ ಕೃತ್ಯ ಎಸಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News