ಐಸಿಸಿ ಟ್ವೆಂಟಿ-20 ರ‍್ಯಾಂಕಿಂಗ್‌: ದ್ವಿತೀಯ ಸ್ಥಾನ ಉಳಿಸಿಕೊಂಡ ರಾಹುಲ್

Update: 2020-02-28 14:04 GMT

ಹೊಸದಿಲ್ಲಿ, ಫೆ.27: ಭಾರತದ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಗುರುವಾರ ಬಿಡುಗಡೆಯಾದ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನ ಉಳಿಸಿಕೊಂಡಿದ್ದಾರೆ. ಈ ತಿಂಗಳಾರಂಭದಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ರಾಹುಲ್ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದರು.

 ರಾಹುಲ್ 823 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಪಾಕಿಸ್ತಾನದ ಬಾಬರ್ ಆಝಂ(879 ಅಂಕ)ನಂ.1 ಸ್ಥಾನದಲ್ಲಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ 673 ಅಂಕ ಗಳಿಸಿ ರ್ಯಾಂಕಿಂಗ್‌ನಲ್ಲಿ 10ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

 ಆಸ್ಟ್ರೇಲಿಯದ‘ಹ್ಯ್ರಾಟ್ರಿಕ್ ಹೀರೊ’, ಎಡಗೈ ಸ್ಪಿನ್ನರ್ ಆ್ಯಶ್ಟನ್ ಅಗರ್ ರ್ಯಾಂಕಿಂಗ್‌ನಲ್ಲಿ ಭಾರೀ ಏರಿಕೆ ಕಂಡಿದ್ದಾರೆ. ಅಗರ್ ಕಳೆದ ವಾರ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಬ್ರೆಟ್ ಲೀ ಬಳಿಕ ಹ್ಯಾಟ್ರಿಕ್ ವಿಕೆಟ್ ಪಡೆದಿರುವ ಆಸ್ಟ್ರೇಲಿಯದ ಎರಡನೇ ಬೌಲರ್ ಆಗಿದ್ದಾರೆ.

ಐಸಿಸಿ ರ್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿದ್ದ ಅಗರ್ ಇದೀಗ 712 ಅಂಕಗಳೊಂದಿಗೆ ಆರು ಸ್ಥಾನ ಮೇಲಕ್ಕೇರಿ 4ನೇ ಸ್ಥಾನಕ್ಕೆ ತಲುಪಿದ್ದಾರೆ. ಆಸ್ಟ್ರೇಲಿಯದ ಇನ್ನೋರ್ವ ಸ್ಪಿನ್ನರ್ ಆ್ಯಡಮ್ ಝಾಂಪ 713 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಅಗರ್ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಒಟ್ಟು 8 ವಿಕೆಟ್‌ಗಳನ್ನು ಉರುಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ರ್ಯಾಂಕಿಂಗ್‌ನಲ್ಲಿ ಅಗ್ರ-5ರೊಳಗೆ ಸ್ಥಾನ ಪಡೆದಿದ್ದಾರೆ. ದ.ಆಫ್ರಿಕಾದ ಸ್ಪಿನ್ನರ್ ತಬ್ರೈಝ್ ಶಂಸಿ ಮೂರು ಸ್ಥಾನ ಭಡ್ತಿ ಪಡೆದು 5ನೇ ಸ್ಥಾನಕ್ಕೇರಿದ್ದಾರೆ.

ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನ ಅಗ್ರ-10ರಲ್ಲಿ ಭಾರತದ ಯಾವ ಬೌಲರ್ ಕೂಡ ಸ್ಥಾನ ಪಡೆದಿಲ್ಲ. 12ನೇ ಸ್ಥಾನದಲ್ಲಿರುವ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಟಿ-20ಯಲ್ಲಿ ಗರಿಷ್ಠ ರ‍್ಯಾಂಕ್ ನಲ್ಲಿರುವ ಭಾರತದ ಬೌಲರ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News