ಕೊರೊನಾವೈರಸ್ ವದಂತಿ ಹೋಗಲಾಡಿಸಲು ವೇದಿಕೆಯಲ್ಲೇ ಕೋಳಿ ಮಾಂಸ ತಿಂದ ಸಚಿವರು !

Update: 2020-02-29 07:33 GMT

ಹೊಸದಿಲ್ಲಿ, ಫೆ.29: ಹೈದರಾಬಾದ್‌ನಲ್ಲಿ ಸಚಿವರುಗಳು ವೇದಿಕೆಯೊಂದರಲ್ಲಿ ಸಾಲಗಟ್ಟಿ ನಿಂತು ಚಿಕನ್ ತುಂಡು ತಿಂದು ಗಮನ ಸೆಳೆದರು. ಬಿಳಿ ಶರ್ಟ್‌ಗಳನ್ನು ಧರಿಸಿದ್ದ ಸಚಿವರುಗಳು ಒಂದು ಕೈಯಲ್ಲಿ ಕೋಳಿ ಕಾಲಿನ ತುಂಡು ಹಾಗೂ ಮತ್ತೊಂದು ಕೈಯಲ್ಲಿ ಪೇಪರ್ ಪೇಟ್‌ಗಳನ್ನು ಹಿಡಿದಿದ್ದರು.

ಕೋಳಿ ಮಾಂಸ ಹಾಗೂ ಕೋಳಿ ಮೊಟ್ಟೆ ತಿನ್ನುವುದರಿಂದ ಕೊರೋನ ವೈರಸ್ ಹರಡುತ್ತದೆ ಎಂಬ ವದಂತಿಯು ಕೋಳಿ ಹಾಗೂ ಮೊಟ್ಟೆ ಮಾರಾಟದ ಮೇಲೆ ಕೆಟ್ಟ ಪರಿಣಾಮಬೀರಿದೆ. ಹೀಗಾಗಿ ಹೈದರಾಬಾದ್‌ನ ಪೀಪಲ್ ಪ್ಲಾಜಾದಲ್ಲಿ ಶುಕ್ರವಾರ ತೆಲಂಗಾಣ ಪೌಲ್ಟ್ರಿ ಬೀಡರ್ಸ್ ಅಸೋಸಿಯೇಶನ್, ತೆಲಂಗಾಣ ಪೌಲ್ಟ್ರಿ ಫೆಡರೇಶನ್ ಜೊತೆಗೆ ರಾಷ್ಟ್ರೀಯ ಮೊಟ್ಟೆ ಉತ್ಪನ್ನ  ಸಮನ್ವಯ ಸಮಿತಿಯು ಜನರಲ್ಲಿ ಭೀತಿ ಹೋಗಲಾಡಿಸಲು ಕೋಳಿ ಹಾಗೂ ಮೊಟ್ಟೆ ಮೇಳ ಕಾರ್ಯಕ್ರಮ ಆಯೋಜಿಸಿತ್ತು. ತೆಲಂಗಾಣ ಸಚಿವ ಕೆಟಿ ರಾಮರಾವ್ ಕೋಳಿ ಹಾಗೂ ಮೊಟ್ಟೆ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಸುಮಾರು 20,000 ಜನರು ತಯಾರಿಸಲ್ಪಟ್ಟಿದ್ದ ಕೋಳಿ ಹಾಗೂ ಮೊಟ್ಟೆಯನ್ನು ಸೇವಿಸಿದರು.

ಕೊರೋನ ವೈರಸ್‌ಗೂ ಚಿಕನ್‌ಗೆ ಯಾವುದೇ ಸಂಬಂಧವಿಲ್ಲ. ನನ್ನ ಕುಟುಂಬ, ನಾನು ಹಾಗೂ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಪ್ರತಿದಿನವೂ ಕೋಳಿ ಹಾಗೂ ಮೊಟ್ಟೆ ತಿನ್ನುತ್ತೇವೆ ಎಂದು ರಾಮರಾವ್ ಹೇಳಿದ್ದಾರೆ. ವೇದಿಕೆಯಲ್ಲಿ ಆರೋಗ್ಯ ಸಚಿವ ಇಟೆಲಾ ರಾಜೇಂದ್ರ, ತೆಲಸನಿ ಶ್ರೀನಿವಾಸ ಯಾದವ್ ಹಾಗೂ ಇತರರು ಇದ್ದರು.

ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕೊರೋನ ವೈರಸ್ ಮೊದಲಿಗೆ ಚೀನಾದ ವುಹಾನ್‌ನ ಸಮುದ್ರ ಆಹಾರದ ಮಾರುಕಟ್ಟೆಯಲ್ಲಿ ಕಂಡುಬಂದಿತ್ತು. ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಿದೆ ಎಂಬ ವದಂತಿ ಹಬ್ಬಿತ್ತು. ಆದರೆ, ಸಂಶೋಧಕರು ವೈರಸ್‌ನ ಮೂಲ ಯಾವುದೆಂದು ಕಂಡುಹಿಡಿಯಲು ಶೋಧನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News