ಈ ದೇಶದಲ್ಲಿ ಇಂದಿನಿಂದ ಉಚಿತ ಸಾರಿಗೆ ಸೌಲಭ್ಯ

Update: 2020-02-29 05:58 GMT

ಲಕ್ಸೆಂಬರ್ಗ್ : ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ತಡೆಯುವ ಉದ್ದೇಶದಿಂದ ಇಂದಿನಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ತನ್ನ ನಾಗರಿಕರಿಗೆ ಸಂಪೂರ್ಣವಾಗಿ ಉಚಿತಗೊಳಿಸಿದ ಜಗತ್ತಿನ ಪ್ರಥಮ ರಾಷ್ಟ್ರವೆಂಬ ಹೆಗ್ಗಳಿಕೆಗೆ ಲಕ್ಸೆಂಬರ್ಗ್ ಪಾತ್ರವಾಗಿದೆ.

ಅಲ್ಲಿನ ಸರಕಾರದ ಈ ಕ್ರಮದಿಂದಾಗಿ ಆ ದೇಶದ ಪ್ರತಿಯೊಬ್ಬ ನಾಗರಿಕ ವಾರ್ಷಿಕ ಸುಮಾರು 100 ಯುರೋ (110 ಡಾಲರ್) ಉಳಿತಾಯ ಮಾಡಿದಂತಾಗುತ್ತದೆ.

ಆದರೆ ಈ ಉಚಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರೈಲುಗಳಲ್ಲಿ ಹಾಗೂ ಕೆಲ ರಾತ್ರಿ ಬಸ್ಸುಗಳಲ್ಲಿ ಪ್ರಥಮ ದರ್ಜೆಯ ಪ್ರಯಾಣ ಟಿಕೆಟ್‍ಗಳಿಗೆ ಅನ್ವಯಿಸುವುದಿಲ್ಲ.

ಲಕ್ಸೆಂಬರ್ಗ್ನಲ್ಲಿ  ಹೆಚ್ಚಿನ ಜನರು ತಮ್ಮ ಖಾಸಗಿ ಕಾರುಗಳಲ್ಲಿಯೇ ಪ್ರಯಾಣಿಸುತ್ತಾರೆ. ಎರಡು ವರ್ಷಗಳ ಹಿಂದೆ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರ ಶೇ 32ರಷ್ಟು ಜನ ಮಾತ್ರ ತಮ್ಮ ಉದ್ಯೋಗ ಸ್ಥಳಗಳಿಗೆ ಬಸ್ಸುಗಳಲ್ಲಿ ಸಂಚರಿಸುತ್ತಾರೆ. ಶೇ 19ರಷ್ಟು ಜನ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಲಕ್ಸೆಂಬರ್ಗ್ನಲ್ಲಿ ಟ್ರಾಮ್ ನಿರ್ಮಾಣ ಕಾರ್ಯ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದು ಹೇಳಲಾಗಿದೆ. ಈ ಟ್ರಾಮ್‍ನ ಒಂದು ಭಾಗ 2017ರಿಂದ ಕಾರ್ಯಾಚರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News