ವಾಜಪೇಯಿ ಮಾತನ್ನು ಕೇಳದವರು ನಮ್ಮ ಮಾತು ಕೇಳುತ್ತಾರಾ: ಬಿಜೆಪಿಗೆ ಕಾಂಗ್ರೆಸ್ ತಿರುಗೇಟು

Update: 2020-02-29 07:30 GMT

  ಹೊಸದಿಲ್ಲಿ, ಫೆ.29: ಗುಜರಾತ್ ಕೋಮು ಗಲಭೆಯ ವೇಳೆ ‘ರಾಜಧರ್ಮ’ಪಾಲಿಸುವಂತೆ ಅಟಲ್ ಬಿಹಾರಿ ವಾಜಪೇಯಿ ನೀಡಿದ ಸಲಹೆಯನ್ನು ಕೇಳದವರು ನಮ್ಮ ಮಾತನ್ನು ಕೇಳುತ್ತೀರಾ? ಎಂದು ಕಾಂಗ್ರೆಸ್ ಪಕ್ಷ ಬಿಜೆಪಿಗೆ ತಿರುಗೇಟು ನೀಡಿದೆ.

 ದಿಲ್ಲಿಯಲ್ಲಿ ಹಿಂಸಾಚಾರ ನಡೆದು 40ಕ್ಕೂ ಅಧಿಕ ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ರನ್ನು ಭೇಟಿಯಾಗಿದ್ದ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ, ಗೃಹ ಸಚಿವ ಅಮಿತ್ ಶಾರಿಂದ ರಾಜೀನಾಮೆ ಪಡೆಯಬೇಕು ಹಾಗೂ ರಾಜಧರ್ಮ ಪಾಲಿಸುವಂತೆ ಮೋದಿ ಸರಕಾರಕ್ಕೆ ತಾವು ಸೂಚನೆ ನೀಡಬೇಕೆಂದು ಕೇಳಿಕೊಂಡಿತ್ತು.

 ಕಾಂಗ್ರೆಸ್‌ನವರು ನಮಗೆ ರಾಜಧರ್ಮವನ್ನು ಕಲಿಸಲು ಪ್ರಯತ್ನಿಸುತ್ತಿದ್ದಾರೆ. ಅದರ ಅಗತ್ಯ ನಮಗಿಲ್ಲ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ತಮ್ಮ ಪ್ರಚೋದನಕಾರಿ ಹೇಳಿಕೆ ಮೂಲಕ ದಿಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ರವಿ ಶಂಕರ ಪ್ರಸಾದ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಕೇಂದ್ರ ಸಚಿವ ಪ್ರಸಾದ್ ಅವರು ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಗೆ ಟ್ವಿಟರ್‌ನಲ್ಲಿ ಶನಿವಾರ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಾಲ್, ಕಾಂಗ್ರೆಸ್‌ಗೆ ಕಾನೂನು ಸಚಿವರು ಹೇಳುತ್ತಾರೆ: "ದಯವಿಟ್ಟು ನಮಗೆ ರಾಜಧರ್ಮ ಕಲಿಸಬೇಡಿ’’ ಎಂದು.

ಸಚಿವರಿಗೆ ರಾಜಧರ್ಮ ಕಲಿಸಲು ಯಾವ್ಯಾರು? ಗುಜರಾತ್‌ನಲ್ಲಿ ರಾಜಧರ್ಮ ಪಾಲಿಸಿ ಎಂದು ವಾಜಪೇಯಿ ಹೇಳಿದ ಮಾತನ್ನೇ ಕೇಳದವರು ನಮ್ಮ ಮಾತನ್ನು ಕೇಳುತ್ತಾರೆಯೇ?. ಆಲಿಸುವುದು, ಕಲಿಯುವುದು ಹಾಗೂ ರಾಜಧರ್ಮಕ್ಕೆ ಗೌರವ ನೀಡುವುದು ನಿಮ್ಮ ಸರಕಾರದ ಬಲವಾದ ಅಂಶಗಳಲ್ಲೇ ಇಲ್ಲ’’ ಎಂದು ಟ್ವೀಟ್ ಮಾಡಿದ್ದಾರೆ.

2002ರಲ್ಲಿ ಗುಜರಾತ್‌ನಲ್ಲಿ ಕೋಮುಗಲಭೆ ನಡೆದ ಸಂದರ್ಭದಲ್ಲಿ ಆಗಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ರಾಜಧರ್ಮ ಪಾಲಿಸುವಂತೆ ಹೇಳಿದ್ದನ್ನು ಕಾಂಗ್ರೆಸ್‌ನ ಹಿರಿಯ ನಾಯಕ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News