ಐದು ಟ್ರಿಲಿಯನ್ ಆರ್ಥಿಕತೆ ಹೊಂದಲು ಸರಕಾರಿ ನೌಕರರ ಪಾತ್ರ ಪ್ರಮುಖ: ಪ್ರಹ್ಲಾದ್ ಜೋಶಿ

Update: 2020-02-29 11:51 GMT

ಬೆಂಗಳೂರು, ಫೆ.29: ದೇಶವು ಐದು ಟ್ರಿಲಿಯನ್ ಆರ್ಥಿಕತೆ ಹೊಂದಲು ರಾಜ್ಯ ಸರಕಾರಿ ನೌಕರರ ಪಾತ್ರ ಪ್ರಮುಖವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ನಗರದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಹ ಸದೃಢ ಮತ್ತು ಮನಸ್ಸು ಸಮಚಿತ್ತ, ಬುದ್ಧಿ ಶಾಂತವಾಗಿರಬೇಕು. ಆಗ ಮಾತ್ರ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು.

ಮನುಷ್ಯ ಉತ್ಸಾಹದಿಂದ ಕಾರ್ಯ ನಿರ್ವಹಿಸಲು ದಿನನಿತ್ಯ ವ್ಯಾಯಾಮ ಹಾಗೂ ತಮಗಿಷ್ಟವಾದ ಆಟವನ್ನು ಆಡಬೇಕು. ಭಾರತ ಸರಕಾರವು ಮಕ್ಕಳಿಗೆ ಹಾಗೂ ಯುವಕರಿಗೆ ಕ್ರೀಡಾ ತರಬೇತಿ ನೀಡುವ ಹಿನ್ನೆಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ನಿರ್ಮಿಸಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಕ್ರೀಡೆಯು ಎರಡು ಮೂರು ದಿನಕ್ಕೆ ಸೀಮಿತವಾಗದೆ ಪ್ರತಿದಿನ ಕ್ರೀಡೆಯಲ್ಲಿ ಭಾಗವಹಿಸಿ ದೇಹ ಮತ್ತು ಮನಸ್ಸನ್ನು ಸದೃಢವಾಗಿಟ್ಟುಕೊಳ್ಳಬೇಕು ಎಂದರು.

ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ದೈಹಿಕ ವ್ಯಾಯಾಮ ಮಾಡದೆ ಇರುವ ಕಾರಣ ಇಂದು 18 ರಿಂದ 21 ವರ್ಷದೊಳಗಿನ ಯುವಜನತೆ ಸಕ್ಕರೆ ಹಾಗೂ ಹೃದಯ ಸಂಬಂಧಿ ರೋಗಗಳಿಗೆ ಒಳಗಾಗಿದ್ದಾರೆ. ಪ್ರತಿದಿನ ತಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಲು ಒಂದು ಗಂಟೆಯಾದರೂ ಕ್ರೀಡೆ, ವ್ಯಾಯಾಮ ಹಾಗೂ ಯೋಗವನ್ನು ವಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯತ್ ಸಿಇಓ ಡಾ.ಬಿ.ಸಿ.ಸತೀಶ್, ಕೋಶಾಧ್ಯಕ್ಷ ಶ್ರೀನಿವಾಸ್, ಗೌರವಾಧ್ಯಕ್ಷ ಶಿವರುದ್ರಯ್ಯ, ಪ್ರಾಥಮಿಕ ಶಿಕ್ಷಕರ ಫೆಡರೇಶನ್ ಉಪಾಧ್ಯಕ್ಷ ಬಸವರಾಜ ಗುರಿಕಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News