×
Ad

ನಾಳೆಯಿಂದ ಮಹತ್ವದ ಬಜೆಟ್ ಅಧಿವೇಶನ: ಆಡಳಿತ-ಪ್ರತಿಪಕ್ಷಗಳ ನಡುವಿನ ವಾಗ್ಯುದ್ಧಕ್ಕೆ ವೇದಿಕೆ ಸಜ್ಜು

Update: 2020-03-01 17:28 IST

ಬೆಂಗಳೂರು, ಮಾ. 1: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಮಹತ್ವದ ಬಜೆಟ್ ಅಧಿವೇಶನ ನಾಳೆ(ಮಾ.2)ಯಿಂದ ಆರಂಭಗೊಳ್ಳಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಗ್ಯುದ್ಧಕ್ಕೆ ವೇದಿಕೆ ಸಜ್ಜುಗೊಂಡಿದೆ.

ಬಿಎಸ್‌ವೈ ಅಧಿಕಾರ ವಹಿಸಿಕೊಂಡ ಬಳಿಕ ಮಂಡಿಸುತ್ತಿರುವ ಮೊದಲ ಬಜೆಟ್ ಇದಾಗಿದೆ. ಸಂಪನ್ಮೂಲಗಳ ಕೊರತೆ, ಕೇಂದ್ರದ ಅನುದಾನ ಕಡಿತ, ನೆರೆ ಸಂಕಷ್ಟದ ನಡುವೆ ಯಡಿಯೂರಪ್ಪ, ರೈತರು ಮತ್ತು ಜನರಿಗೆ ಏನು ಕೊಡುಗೆ ನೀಡಲಿದ್ದಾರೆಂಬ ನಿರೀಕ್ಷೆ ಹೆಚ್ಚಾಗಿದೆ.

ಸರಕಾರದ ಉತ್ತರ: ನಾಳೆ (ಮಾ.2)ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ವಂದನಾರ್ಪಣಾ ಪ್ರಸ್ತಾವದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರ ನೀಡಲಿದ್ದು, ಮಾ.3 ಮತ್ತು 4ರಂದು ಸಂವಿಧಾನಕ್ಕೆ ಸಂಬಂಧಿಸಿದಂತೆ ಚರ್ಚೆ ನಿಗದಿಯಾಗಿದೆ. ಮಾ.5ಕ್ಕೆ ಹಣಕಾಸು ಖಾತೆಯನ್ನು ಹೊಂದಿರುವ ಸಿಎಂ ಯಡಿಯೂರಪ್ಪ 2020-21ನೆ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಆದರೆ, ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸಜ್ಜಾಗಿವೆ.

ಈ ಮಧ್ಯೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಅವಹೇಳಕಾರಿ ಹೇಳಿಕೆ, ಪರ-ವಿರೋಧ ಹೋರಾಟ, 'ಪಾಕ್ ಪರ' ಘೋಷಣೆ, ರೈತರ ಸಾಲಮನ್ನಾ ಸೇರಿದಂತೆ ರಾಜ್ಯದ ಇನ್ನಿತರ ಸಮಸ್ಯೆಗಳು ಅಧಿವೇಶನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳಿವೆ.

ಸಮರ್ಥನೆ: ‘ಯತ್ನಾಳ್ ಬಹಿರಂಗ ಕ್ಷಮೆ ಕೇಳದಿದ್ದರೆ ಸದನ ನಡೆಯಲು ಬಿಡುವುದಿಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದು, ಕಾಂಗ್ರೆಸ್ ಪ್ರತಿಭಟನೆಯನ್ನೂ ನಡೆಸುತ್ತಿದೆ. ಆದರೆ, ‘ನಾನು ಯಾವುದೇ ಕಾರಣಕ್ಕೂ ನಾನು ಕ್ಷಮೆ ಯಾಚಿಸುವುದಿಲ್ಲ’ ಎಂದು ಯತ್ನಾಳ್ ತಿರುಗೇಟು ನೀಡಿದ್ದಾರೆ.

ಈ ನಡುವೆ ‘ಸದನ ನಡೆಯಲು ಹೇಗೆ ಬಿಡುವುದಿಲ್ಲ, ನಾವು ನೋಡಿಯೇ ತಿರುತ್ತೇವೆ’ ಎಂದು ಬಿಜೆಪಿ ಸವಾಲು ಹಾಕಿದ್ದು, ವಿಧಾನ ಮಂಡಲ ಉಭಯ ಸದನಗಳಲ್ಲಿ ಆರೋಪ-ಪ್ರತ್ಯಾರೋಪ, ಗದ್ದಲ-ಕೋಲಾಹಲ ಸೃಷ್ಟಿಸುವ ಸಾಧ್ಯತೆಗಳು ದಟ್ಟವಾಗಿವೆ.

‘ಹೇಡಿ ಸಾವರ್ಕರ್ ಜತೆ ನನ್ನ ಹೋಲಿಕೆ ಮಾಡಬೇಡಿ’ ಎಂದು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನಿನ್ನೆ ಮತ್ತೊಂದು ಹೇಳಿಕೆ ನೀಡಿದ್ದು, ಇವರಿಂದ ಕೆರಳಿರುವ ಬಿಜೆಪಿ ಮುಖಂಡರು, ದೊರೆಸ್ವಾಮಿ ಕ್ಷಮೆ ಕೋರಬೇಕೆಂದು ಪಟ್ಟು ಹಿಡಿಯುವ ಸಾಧ್ಯತೆಗಳಿವೆ.

ಸಾಲಮನ್ನಾ ವಿಚಾರದಲ್ಲಿ ಆಡಳಿತ-ವಿಪಕ್ಷಗಳ ನಡುವೆ ವಾಕ್ಸಮರ ಏರ್ಪಡುವ ಸಾಧ್ಯತೆಗಳಿವೆ. ಅಲ್ಲದೆ, ಸರಕಾರಿ ನೌಕರರ ವೇತನ ವಿಳಂಬ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ತೆರಿಗೆ ಪಾಲು ಕಡಿತ ಸೇರಿ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷವನ್ನು ಅಡಕತ್ತರಿಯಲ್ಲಿ ಸಿಲುಕಿಸಲು ವಿಪಕ್ಷಗಳು ತಂತ್ರ ರೂಪಿಸಿವೆ. ಇದಕ್ಕೆ ಸೂಕ್ತ ತಿರುಗೇಟು ನೀಡಲು ಆಡಳಿತಾರೂಢ ಬಿಜೆಪಿ ಸಜ್ಜಾಗುತ್ತಿದೆ.

ಮೊದಲ ಬಾರಿಗೆ ಮಾ.2ರಿಂದ 31ರ ವರೆಗೆ ಒಂದು ತಿಂಗಳ ಕಾಲ ಸುದೀರ್ಘ ಅಧಿವೇಶನ ನಡೆಯಲಿದ್ದು, ಬಜೆಟ್ ಮಂಡನೆ, ವಿಧೇಯಕಗಳ ಅಂಗೀಕಾರ ಹಾಗೂ ಸರಕಾರ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯಬೇಕಿದ್ದು, ರಾಜ್ಯದ ಜನರ ಚಿತ್ತ ಬಜೆಟ್ ಅಧಿವೇಶನದತ್ತ ನೆಟ್ಟಿದೆ.

‘ಸಾಲಮನ್ನಾದ ಬಗ್ಗೆ ಬಿಜೆಪಿಯ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಾನು ಸಿಎಂ ಆಗಿದ್ದಾಗ ಮೀಸಲಿಟ್ಟಿದ್ದ 25ಸಾವಿರ ಕೋಟಿ ರೂ.ಹಣವನ್ನು ಬಿಜೆಪಿ ಸರಕಾರ ಬೇರೆಡೆಗೆ ವರ್ಗಾಯಿಸಿದೆ. ರೈತರ ಸಾಲಮನ್ನಾ ಬಗ್ಗೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ ಸರಕಾರದ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ. ರೈತರ ಪರ ನಿಲ್ಲುತ್ತೇನೆ’
-ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

‘ದೊರೆಸ್ವಾಮಿಯವರು ಸೇರಿ ಎಲ್ಲ ಸ್ವಾತಂತ್ರ್ಯ ಸೇನಾನಿಗಳು ಬ್ರಿಟಿಷರ ಲಾಠಿ ಏಟು ತಿಂದಿದ್ದಾರೆ, ಜೈಲಿಗೆ ಹೋಗಿ ಬಂದಿದ್ದಾರೆ. ಅವರ ಪರಿಶ್ರದಿಂದಾಗಿ ನಾವು ಸ್ವತಂತ್ರರಾಗಿದ್ದೇವೆ. ಅಂಥವರ ಬಗ್ಗೆ ಕೀಳಾಗಿ ಮಾತನಾಡಿರುವ ಬಿಜೆಪಿ ಶಾಸಕ ಯತ್ನಾಳ್ ಬಹಿರಂಗವಾಗಿ ಕ್ಷಮೆಯಾಚನೆ ಮಾಡುವ ವರೆಗೂ ಸದನ ನಡೆಯಲು ಬಿಡುವುದಿಲ್ಲ ವಿಪಕ್ಷ ಕಾಂಗ್ರೆಸ್ ಎಚ್ಚರಿಕೆ ನೀಡಿದೆ’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News