ಪುರಭವನದ ಮುಂದೆ ಪ್ರತಿಭಟನೆ ನಿಷೇಧ: ಆದೇಶ ವಾಪಸ್ ಗೆ ಹೋರಾಟಗಾರರು, ಸಾಹಿತಿಗಳ ಪಟ್ಟು
ಬೆಂಗಳೂರು, ಮಾ.1: ಪುರಭವನದ ಮುಂಭಾಗ ಪ್ರತಿಭಟನೆ ಮಾಡುವುದಕ್ಕೆ ನಿರ್ಬಂಧ ಹೇರಿರುವ ಬಿಬಿಎಂಪಿಯ ತೀರ್ಮಾನವನ್ನು ದಲಿತ, ಮಹಿಳಾ, ಕನ್ನಡಪರ ಹೋರಾಟಗಾರರು, ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಜನಪ್ರತಿನಿಧಿಗಳು, ಸಾಹಿತಿಗಳು ತೀವ್ರವಾಗಿ ಖಂಡಿಸಿದ್ದು, ಪ್ರಜಾಪ್ರಭುತ್ವ ವಿರೋಧಿ ನಿಯಮವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆ ಎನ್ನುವುದು ಪ್ರಜಾಪ್ರಭುತ್ವದ ಮೂಲಭೂತವಾದ ಲಕ್ಷಣ. ಈ ಹಿಂದೆ ವಿಧಾನಸೌಧದ ಮುಂಭಾಗ ಜನರ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿದ್ದೆವು. ಜನಪ್ರತಿನಿಧಿಗಳ ಸುರಕ್ಷತೆಯ ನೆಪಹೇಳಿ ಅಲ್ಲಿಂದ ಕೆ.ಆರ್.ಸರ್ಕಲ್‌ಗೆ ಪ್ರತಿಭಟನೆಗಳನ್ನು ವರ್ಗಾಯಿಸಿದರು. ನಂತರ, ಅಲ್ಲಿಂದ ಕಬ್ಬನ್ ಪಾರ್ಕ್ ಮೈದಾನಕ್ಕೆ ಪ್ರತಿಭಟನಾಕಾರರನ್ನು ದೂಡಿದರು. ಈಗ ಟೌನ್‌ಹಾಲ್ ಮುಂಭಾಗದಲ್ಲೂ ಪ್ರತಿಭಟನೆ ಮಾಡದಂತೆ ಬಿಬಿಎಂಪಿ ಕೈಗೊಂಡಿರುವ ಕ್ರಮ ಸಂವಿಧಾನ ಜನತೆಗೆ ನೀಡಿರುವ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರವಾಗಿದೆ ಎಂದು ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
ಪ್ರಭುತ್ವದ ದಮನಕಾರಿ ನೀತಿಗಳ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟನೆ ಮಾಡುವುದಕ್ಕೆ ಟೌನ್‌ಹಾಲ್ ಸೂಕ್ತವಾದ ಸ್ಥಳವಾಗಿತ್ತು. ಹಾಗೂ ಟೌನ್‌ಹಾಲ್ ವೃತ್ತವು ಹೆಚ್ಚು ವಾಹನಗಳು ಓಡಾಡುವ ಸ್ಥಳವಾಗಿರುವುದರಿಂದ ಪ್ರತಿಭಟನೆಯ ಆಶಯಗಳು ಜನತೆಗೆ ಸುಲಭವಾಗಿ ತಲುಪುತ್ತಿತ್ತು. ಆ ಮೂಲಕ ಸಾರ್ವಜನಿಕ ಚರ್ಚೆಗೆ ಕಾರಣವಾಗುತ್ತಿತ್ತು. ಆದರೆ, ಬಿಬಿಎಂಪಿ ಪ್ರತಿಭಟನೆಗಳನ್ನು ನಿಷೇಧಿಸಿರುವುದು ಜನತೆಗೆ ಮಾಡುವ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಬಿಬಿಎಂಪಿ ನೆಪ ಹುಡುಕುತ್ತಿದೆ: ಟೌನ್‌ಹಾಲ್ ಮುಂಭಾಗ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಟೌನ್‌ಹಾಲ್ ಒಳಗೆ ಕಾರ್ಯಕ್ರಮ ನಡೆಸಲು ಯಾರು ಮುಂದೆ ಬರುತ್ತಿಲ್ಲ. ಹೀಗಾಗಿ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆಯೆಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ. ಆದರೆ, ಇವರ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಬದಲಿಗೆ, ಟೌನ್‌ಹಾಲ್‌ನ್ನು ನವೀಕರಣದ ನಂತರ ಅದರ ಬಾಡಿಗೆಯನ್ನು 1.25 ಲಕ್ಷ ರೂ.ಏರಿಕೆ ಮಾಡಿದರು. ಇದರಿಂದ ಅಲ್ಲಿ ಕಾರ್ಯಕ್ರಮ ನಡೆಸಲು ಯಾರು ಮುಂದಾಗುತ್ತಿಲ್ಲವೆಂದು ಜನವಾದಿ ಮಹಿಳಾ ಸಂಘಟನೆ ವಿಮಲಾ ಅಭಿಪ್ರಾಯಿಸಿದ್ದಾರೆ.
ಹತ್ತಾರು ವರ್ಷಗಳಿಂದಲೂ ಪುರಭವನ ಮುಂಭಾಗ ಪ್ರತಿಭಟನೆ ಮಾಡಿಕೊಂಡು ಬರಲಾಗುತ್ತಿದೆ. ಇಲ್ಲಿಯವೆಗೂ ಯಾವುದೇ ಹಿಂಸಾತ್ಮಕ ಚಟುವಟಿಕೆಗಳು ನಡೆದಿಲ್ಲ. ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ವಾಪಸ್ ಆಗುತ್ತಿದ್ದೆವು. ಈಗಲೂ ಬಿಬಿಎಂಪಿ ಕೈಗೊಂಡಿರುವ ನಿರ್ಣಯವನ್ನು ಧಿಕ್ಕರಿಸಿ ಪುರಭವನದ ಮುಂಭಾಗ ಪ್ರತಿಭಟನೆಯನ್ನು ಮಾಡಿಯೇ ತೀರುತ್ತೇವೆ.
‘ಪುರಭವನದ ಮುಂಭಾಗ ಪ್ರತಿಭಟನೆಗಳಿಗೆ ನಿಷೇಧ ಏರಿರುವುದು ಪ್ರಭುತ್ವವೇ ಪ್ರತಿಭಟನಾಕಾರರ ಕತ್ತನ್ನು ಹಿಸುಕಿದಂತೆ. ಸೈದ್ಧಾಂತಿಕ ಭಿನ್ನಾಭಿಪ್ರಾಯವೇ ಪ್ರಜಾಪ್ರಭುತ್ವದ ಲಕ್ಷಣ. ಆದರೆ, ಅದನ್ನೇ ಇಲ್ಲವಾಗಿಸಲು ಬಿಜೆಪಿ ಮುಂದಾಗಿರುವುದು ಸರಿಯಲ್ಲ. ಕೂಡಲೇ ಬಿಬಿಎಂಪಿ ಕೈಗೊಂಡಿರುವ ನಿರ್ಣಯವನ್ನು ವಾಪಸ್ ಪಡೆಯಬೇಕು’
-ಮಾವಳ್ಳಿ ಶಂಕರ್, ದಸಂಸ ಸಂಚಾಲಕ
ಪುರಭವನದ ಮುಂಭಾಗ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಆದಾಯ ಕಡೆಮೆ ಅಗಿದೆಯೆಂದು ಬಿಬಿಎಂಪಿ ಮೇಯರ್ ಹೇಳುತ್ತಿದ್ದಾರೆ. ಸರಕಾರಕ್ಕೆ ಆದಾಯ ಮಾಡಿಕೊಡುವ ಉದ್ದೇಶವಿದ್ದರೆ, ಶೇ.1ರಷ್ಟಿರುವ ಶ್ರೀಮಂತರ ಮೇಲಿನ ತೆರಿಗೆಯನ್ನು ಹೆಚ್ಚಿಸಲಿ. ಆದರೆ, ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುವ ಕೆಲಸವಾಗ ಕೂಡದು’
-ಚೇತನ್, ಚಿತ್ರನಟ
‘ಪುರಭವನದ ಮುಂಭಾಗ ಪ್ರತಿಭಟನೆ ಮಾಡುವುದನ್ನು ನಿಷೇಧಿಸಿ ನಿರ್ಣಯ ಕೈಗೊಂಡಿರುವ ಬಿಬಿಎಂಪಿಯ ಕ್ರಮ ಖಂಡನೀಯ. ಇದು ನಾಗರಿಕರ ಪ್ರಜಾತಾಂತ್ರಿಕ ಪ್ರತಿಭಟನಾ ಹಕ್ಕಿನ ಮೇಲಿನ ಉಗ್ರ ದಾಳಿಯಾಗಿದೆ. ಈ ಕ್ರಮದ ವಿರುದ್ಧ ಪ್ರಬಲ ಪ್ರತಿಭಟನಾ ದನಿ ಎತ್ತುತ್ತೇವೆ’
-ಎಂ.ಎನ್.ಶ್ರೀರಾಮ್, ಜಿಲ್ಲಾ ಕಾರ್ಯದರ್ಶಿ, ಎಸ್‌ಯುಸಿಐ
‘ಪುರಭವನದ ಮುಂದೆ ಪ್ರತಿಭಟನೆಗೆ ನಿಷೇಧ ಮಾಡಿ ನಿರ್ಣಯ ಕೈಗೊಂಡಿರುವ ಬಿಬಿಎಂಪಿಗೆ ಒಂದು ಗಡವು ನೀಡುತ್ತೇವೆ. ಅಷ್ಟರಲ್ಲಿ, ಈ ನಿರ್ಣಯನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ, ಮೇಯರ್, ಪಾಲಿಕೆ ಸದಸ್ಯರ ಮನೆ ಮುಂದೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಕೈಗೊಳ್ಳಲಾಗುವುದು’
-ವಾಟಾಳ್ ನಾಗರಾಜ್, ರಾಜ್ಯಾಧ್ಯಕ್ಷ, ವಾಟಾಳ್ ಪಕ್ಷ
-ಬಿಜೆಪಿ ಸರಕಾರ ಹಾಗೂ ಅದರ ಅವರ ಹಿಂದಿರುವ ಆರೆಸ್ಸೆಸ್‌ಗೆ ಜನಪರ ಪ್ರತಿಭಟನೆಗಳಿಂದ ಭಯ ಶುರವಾಗಿದೆ. ಅದರಲ್ಲೂ ಸಿಎಎ ವಿರೋಧಿಸಿ ಟೌನ್‌ಹಾಲ್ ಮುಂಭಾಗ ನಡೆಯುತ್ತಿರುವ ಪ್ರತಿಭಟನೆಯಿಂದ ಸರಕಾರದ ವಿರುದ್ಧ ಜನಾಭಿಪ್ರಾಯ ಶುರುವಾಗಿದೆ. ಹೀಗಾಗಿ ಬಿಬಿಎಂಪಿ ಮೂಲಕ ಬಿಜೆಪಿ ಪ್ರತಿಭಟನೆ ನಿಷೇಧಿಸಲು ಮುಂದಾಗಿದೆ. ಈ ನಿರ್ಣಯವನ್ನು ವಿರೋಧಿಸಿ ಪ್ರತಿಪಕ್ಷದ ನಾಯಕರು ಸದನದಲ್ಲಿ ಧ್ವನಿ ಎತ್ತಬೇಕಾಗಿದೆ.
-ಜಿ.ಎನ್.ನಾಗರಾಜ್, ಸಿಪಿಎಂ ಮುಖಂಡರು