ನಿಷೇಧ ಆದೇಶಕ್ಕೆ ಖಂಡನೆ: ಪುರಭವನದ ಮುಂದೆಯೇ ಪ್ರತಿಭಟಿಸಿ ಆಕ್ರೋಶ
ಬೆಂಗಳೂರು, ಮಾ.1: ನಗರದ ಟೌನ್‌ಹಾಲ್ ಮುಂಭಾಗ ಪ್ರತಿಭಟನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಷೇಧ ಹೇರಿರುವುದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಸದಸ್ಯರು, ರವಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ಪುರಭವನ ಮುಂಭಾಗ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಜಮಾಯಿಸಿದ ಸದಸ್ಯರು, ಕಪ್ಪು ಪಟ್ಟಿ ಧರಿಸಿ, ಬಿಬಿಎಂಪಿ ಮೇಯರ್ ಎಂ. ಗೌತಮ್ ಕುಮಾರ್ ಅವರು ಕೈಗೊಂಡಿರುವ ನಿರ್ಣಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ನೊಂದವರ ಪರ ಪ್ರತಿಭಟನೆ ಮೂಲಕ ಧ್ವನಿಗೂಡಿಸಲು ಪುರಭವನ ಶಕ್ತಿ ಕೇಂದ್ರವಾಗಿತ್ತು. ಇಲ್ಲಿನ ನೂರಾರು ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ, ಮೆರವಣಿಗೆ, ಸತ್ಯಾಗ್ರಹ ಅಥವಾ ಧರಣಿ ನಡೆಸಿಕೊಂಡು ಬಂದಿದ್ದಾರೆ ಎಂದರು.
ಬಿಬಿಎಂಪಿ ಮೇಯರ್ ಅವರು ಯಾವುದೋ ಕ್ಷುಲ್ಲಕ ಕಾರಣ ನೀಡಿ ಪ್ರತಿಭಟನೆ ಮಾಡಬಾರದೆಂದು ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ನಿರ್ಣಯಿಸಿದ್ದಾರೆ. ಇದು ನಾಡಿನ ಜನತೆಗೆ ಕೆಟ್ಟ ಸಂದೇಶ ನೀಡಿದಂತಾಗುತ್ತದೆ ಎಂದರು.
ಪುರಭವನ ಮುಂಭಾಗ ಪ್ರತಿಭಟನೆಗೆ ನಿಷೇಧ ಹೇರಿರುವ ಮೇಯರ್ ಎಂ.ಗೌತಮ್ ಕುಮಾರ್ ಅವರ ನಿರ್ಧಾರ ಒಪ್ಪತಕ್ಕದ್ದಲ್ಲ. ಅವರಿಂದ ಪ್ರಜಾಪ್ರಭುತ್ವ ದಮನವಾಗಿದೆ ಎಂದ ಅವರು, ಕರ್ನಾಟಕದಲ್ಲಿ ಕನ್ನಡಿಗರು ದನಿ ಎತ್ತುವುದಕ್ಕೆ ಅವಕಾಶ ಕಲ್ಪಿಸಬೇಕು. ಅನ್ಯಭಾಷಿಕರಿಗೆ ಪುರಭವನ ಮುಂಭಾಗ ಪ್ರತಿಭಟನೆಗೆ ಅವಕಾಶ ನೀಡಬೇಡಿ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಬಗ್ಗೆ ಗಮನ ಹರಿಸಬೇಕು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಈ ನಿರ್ಣಯದ ಕುರಿತಂತೆ ಗಂಭೀರ ಚಿಂತನೆ ಮಾಡಬೇಕು ಎಂದು ಒತ್ತಾಯಿಸಿದರು.