ರಾಮನಗರ ಜಿಲ್ಲಾ ಉಸ್ತುವಾರಿ ನೀಡಿದರೆ...: ಸಚಿವ ಸೋಮಶೇಖರ್ ಹೇಳಿದ್ದು ಹೀಗೆ
ಬೆಂಗಳೂರು, ಮಾ. 1: ನನಗೆ ರಾಮನಗರ ಜಿಲ್ಲಾ ಉಸ್ತುವಾರಿ ನೀಡಿದರೆ ಕೆಲಸ ಮಾಡಲು ಸಿದ್ಧ ಎಂದಿರುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ನನಗೆ ಯಾವ ಜಿಲ್ಲೆ ಉಸ್ತುವಾರಿ ನೀಡುತ್ತಾರೆಂದು ಗೊತ್ತಿಲ್ಲ. ಯಾವ ಜಿಲ್ಲೆ ನೀಡಿದರೂ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರವಿವಾರ ಇಲ್ಲಿನ ಚನ್ನಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಜಿಲ್ಲೆ ಉಸ್ತುವಾರಿ ನೀಡಿ ಎಂದು ಕೇಳಿಲ್ಲ. ಆಕಾಂಕ್ಷಿಯೂ ಅಲ್ಲ. ಈಗಾಗಲೇ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣಗೆ ರಾಮನಗರ ಉಸ್ತುವಾರಿ ನೀಡಲಾಗಿದೆ. ಇದು ನನ್ನ ಹುಟ್ಟೂರು, ನಾನು ಓಡಾಡಿರುವ ಊರು ಎಂದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಆಗಮಿಸುತ್ತಿದ್ದು, ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿರುವ ತೆರಿಗೆ ವಂಚನೆ ಬಗ್ಗೆ ಅವರಿಂದ ಮಾಹಿತಿ ಪಡೆದುಕೊಳ್ಳಲಾಗುವುದು ಎಂದ ಅವರು, ನಾವು ಪುನಃ ಕಾಂಗ್ರೆಸ್ ಸೇರ್ಪಡೆ ಪ್ರಶ್ನೆ ಇಲ್ಲ ಎಂದರು.
ಬಿಜೆಪಿಯವರು ನನ್ನನ್ನು ಆಹ್ವಾನಿಸಿದ್ದು, ಶಾಸಕನಾಗಿಯೂ ಆಯ್ಕೆಯಾಗಿದ್ದೇನೆ. ಸಹಕಾರ ಸಚಿವನೂ ಆಗಿದ್ದೇನೆ. ಇಷ್ಟೆಲ್ಲವನ್ನು ಕೊಟ್ಟ ಬಿಜೆಪಿ ತೊರೆದು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಹೈಕಮಾಂಡ್ ಆಹ್ವಾನಿಸಿದರೂ ನಾನೂ ಬಿಜೆಪಿಯಲ್ಲೇ ಇರುತ್ತೇನೆ ಎಂದರು.
ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಈಗಾಗಲೇ ಸಿಎಂ ಒಂದು ತಿಂಗಳ ಸತತ ಸಭೆ ನಡೆಸಿದ್ದು, ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ರೈತರು ಸೇರಿದಂತೆ ವಿವಿಧ ವಲಯಗಳ ತಜ್ಞರ ಜತೆ ಸಮಾಲೋಚನೆ ನಡೆಸಿದ್ದಾರೆಂದ ಅವರು, ರಾಜ್ಯದ ಜನರಿಗೆ ಬಜೆಟ್ ಮೂಲಕ ಬಿಎಸ್‌ವೈ ನ್ಯಾಯ ನೀಡಲಿದ್ದಾರೆ ಎಂದರು.