ದೇಶದ್ರೋಹಿಗಳ ಜೊತೆ ಕಲಾಪದಲ್ಲಿ ನಾವು ಕೂರುವುದಿಲ್ಲ: ಯತ್ನಾಳ್ ವಿರುದ್ಧ ಸಿದ್ದರಾಮಯ್ಯ ಕಿಡಿ

Update: 2020-03-02 14:02 GMT

ಬೆಂಗಳೂರು, ಮಾ. 2: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ ಅವಹೇಳನಕಾರಿ ಹೇಳಿಕೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಗದ್ದಲ, ಕೋಲಾಹಲ, ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಸತ್ಯಾಗ್ರಹಕ್ಕೂ ಕಾರಣವಾಯಿತು.

ಸೋಮವಾರ ವಿಧಾನಸಭೆಯಲ್ಲಿ ಸಂತಾಪ ಸೂಚನೆ ಬಳಿಕ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸಿ, ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸದನಕ್ಕೆ ಅಗೌರವ ತೋರಿದ್ದಾರೆ. ಅಲ್ಲದೆ, ಸ್ವಾತಂತ್ರ್ಯ ಹೋರಾಟಕ್ಕೆ ಅಪಮಾನ ಮಾಡಿದ್ದಾರೆ. ಹೀಗಾಗಿ ಈ ವಿಚಾರ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಡಳಿತಾರೂಢ ಬಿಜೆಪಿ, ಯಾವುದೇ ನೋಟಿಸ್ ನೀಡದೆ ಏಕಾಏಕಿ ಯಾವುದೇ ವಿಚಾರ ಪ್ರಸ್ತಾಪಕ್ಕೆ ಅವಕಾಶ ಸರಿಯಲ್ಲ. ಸದನದ ಹೊರಗೆ ನೀಡಿದ ಹೇಳಿಕೆಯ ಬಗ್ಗೆ ಇಲ್ಲಿ ಚರ್ಚಿಸುವ ಅಗತ್ಯವೇನಿದೆ ಎಂದು ತಿರುಗೇಟು ನೀಡಿದರು.

ಇದರಿಂದ ಸದನದಲ್ಲಿ ಏರಿದ ಧ್ವನಿಯಲ್ಲಿ ಪರ-ವಿರೋಧ, ಗದ್ದಲ-ಕೋಲಾಹಲ ಉಂಟಾಯಿತು. ‘ಸ್ವಾತಂತ್ರ್ಯ ಹೋರಾಟ, ದೊರೆಸ್ವಾಮಿ ಮತ್ತು ಸಾವರ್ಕರ್’ಗೆ ಜಯಕಾರ, ಧಿಕ್ಕಾರದ ಘೋಷಣೆಗಳು ಮೊಳಗಿದವು. ಅಲ್ಲದೆ, ಎರಡು ಬಾರಿ ಕಲಾಪ ಮುಂದೂಡಿಕೆಯೂ ನಡೆಯಿತು.

‘ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸದನಕ್ಕೆ ಅಗೌರವ ತೋರಿದ್ದಾರೆ. ಸಂವಿಧಾನದ ಹೆಸರಲ್ಲಿ ಪ್ರಮಾಣ ಮಾಡಿದವರು ಒಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಂವಿಧಾನಕ್ಕೆ ಮಾಡಿರುವ ಅವಮಾನ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಯತ್ನಾಳ್ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ. ಸದನದ ಹಕ್ಕುಚ್ಯುತಿಯಾಗಿದೆ. ಸಾರ್ವಜನಿಕವಾಗಿ ತಪ್ಪು ಸಂದೇಶ ಹೋಗುತ್ತಿದೆ. ಇದು ಅತ್ಯಂತ ಸಾರ್ವಜನಿಕ ಮಹತ್ವದ ವಿಷಯ. ಹೀಗಾಗಿ ಈ ವಿಷಯ ಪ್ರಸ್ತಾಪಕ್ಕೆ ಅವಕಾಶ ಕೊಡಿ’ ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ‘ಈ ವಿಚಾರಕ್ಕೆ ಸರಕಾರ ಸಹಮತ ವ್ಯಕ್ತಪಡಿಸುವುದಾದರೆ ಚರ್ಚೆಗೆ ಅವಕಾಶ ನೀಡಲು ನನ್ನ ಆಕ್ಷೇಪವಿಲ್ಲ’ ಎಂದು ಸ್ಪೀಕರ್ ಕಾಗೇರಿ ಹೇಳಿದರು. ಈ ವೇಳೆ ಎದ್ದುನಿಂತ ಕಾನೂನು ಸಚಿವ ಮಾಧುಸ್ವಾಮಿ, ‘ಯಾವುದೇ ಸೂಚನಾ ಪತ್ರ ನೀಡದೆ ಮನಸೋ ಇಚ್ಛೆ ವಿಷಯ ಪ್ರಸ್ತಾಪಿಸಲು ಅವಕಾಶವಿಲ್ಲ. ನಿಯಮಗಳನ್ನು ಬಿಟ್ಟು ಸದನ ನಡೆಸಲು ಸಾಧ್ಯವಿಲ್ಲ’ ಎಂದು ಆಕ್ಷೇಪಿಸಿದರು.

ಸಚಿವ ಸಿ.ಟಿ.ರವಿ ಮಾತನಾಡಿ, ಹುತಾತ್ಮ ವೀರ ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಕಾಂಗ್ರೆಸ್ ಪಕ್ಷದವರು ಎಷ್ಟೆಲ್ಲ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸ್ಮರಿಸಿಕೊಳ್ಳಲಿ ಎಂದು ವಾಗ್ಬಾಣ ಬಿಟ್ಟರು. ಇದರಿಂದ ಗದ್ದಲ ಹೆಚ್ಚಾಯಿತು.

ಈ ಮಧ್ಯೆ ಎದ್ದುನಿಂತ ಮಾಜಿ ಸ್ಪೀಕರ್ ರಮೇಶ್‌ ಕುಮಾರ್, ಈ ಸದನದಲ್ಲಿ ನಡಾವಳಿಗಳನ್ನು ರೂಪಿಸುವ ವೇಳೆ ವಿಧಾನಸಭೆಗೆ ಇಂತಹ ಮಹಾನುಭಾವರು, ಮಹಾತ್ಮರು ಬರುತ್ತಾರೆಂದು ಗೊತ್ತಿರಲಿಲ್ಲ. ಇದೀಗ ಇಂತಹ ವಿಚಾರಗಳೆಲ್ಲ ಚರ್ಚೆಯಾಗಬೇಕಾಗಬಹುದು ಎಂಬ ಮಾಹಿತಿ ಇರಲಿಲ್ಲ ಎಂದು ಲೇವಡಿ ಮಾಡಿದರು.

‘ಯಾರು ಮಹಾತ್ಮರು, ಯಾರು ಮಹಾತ್ಮರಲ್ಲ ಎಂಬ ವಿಷಯ ನಾವು ನಿರ್ಧಾರ ಮಾಡುವುದಲ್ಲ. ಮತ ಹಾಕಿ ಕಳುಹಿಸಿದ ಜನರೇ ತೀರ್ಪು ನೀಡಿದ್ದಾರೆ. ಹೀಗಾಗಿ ಕಲಾಪ ನಿಯಮಗಳಡಿಯಲ್ಲೇ ನಡೆಯಬೇಕಿದೆ’ ಎಂದು ಜೆ.ಸಿ.ಮಾಧುಸ್ವಾಮಿ ಇದೇ ವೇಳೆ ಹೇಳಿದರು.

ಈ ಗದ್ದಲದ ಮಧ್ಯೆ ಸ್ಪೀಕರ್ ಕಾಗೇರಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದರು. ಚರ್ಚೆಗೆ ಅವಕಾಶ ನೀಡದ ಕ್ರಮವನ್ನು ಖಂಡಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾಗಿಗಿಳಿದು ಧರಣಿ ನಡೆಸಿದರು.

ಸಮ್ಮತಿ ಇದೆಯೇ: ‘ಬಿಜೆಪಿ ನಾಯಕರು, ಮಂತ್ರಿಗಳು ಯತ್ನಾಳ್ ಹೇಳಿಕೆಯನ್ನು ಖಂಡಿಸುವ ಬದಲು ಬೆಂಬಲಿಸಿ ಮಾತನಾಡುತ್ತಾರೆ. ಪಕ್ಷದ ಶಾಸಕನೊಬ್ಬ ದೇಶದ ಸ್ವಾತಂತ್ರ್ಯ ಚಳವಳಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನಿಸುವುದು ವೈಯಕ್ತಿಕ ಅಭಿಪ್ರಾಯ ಹೇಗಾಗುತ್ತದೆ? ಹಾಗಾದರೆ ಯತ್ನಾಳ್ ಹೇಳಿಕೆಗೆ ಬಿಜೆಪಿ ಸಮ್ಮತಿ ಇದೆಯೇ ಎಂಬುದನ್ನು ಅಧಿಕೃತವಾಗಿ ಸ್ಪಷ್ಟಪಡಿಸಲಿ’ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

‘ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರನ್ನು ಒಂದು ಪಕ್ಷಕ್ಕೆ ಕಟ್ಟಿಹಾಕುವುದು ಸಲ್ಲ. ಅವರು ಹಿಂದೆ ತುರ್ತುಪರಿಸ್ಥಿತಿಯ ಕಾಲದಲ್ಲಿ ಇಂದಿರಾಗಾಂಧಿ ವಿರುದ್ಧವೂ ಪ್ರತಿಭಟಿಸಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರಕಾರದ ವಿರುದ್ಧವೂ ಪ್ರತಿಭಟನೆ ನಡೆಸಿದ್ದರು’ ಎಂದು ಸಿದ್ದರಾಮಯ್ಯ ಹೇಳಿದರು. ‘ಸದನಕ್ಕೆ ಅಗೌರವ ತೋರುವ ಸದಸ್ಯರನ್ನು ಅಮಾನತು ಮಾಡಬೇಕೆಂದು ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿತ್ತು. ಆ ತೀರ್ಪನ್ನು ಆಧಾರವಾಗಿ ಇಟ್ಟುಕೊಂಡು ಯತ್ನಾಳ್ ಅವರನ್ನು ಅಮಾನತು ಮಾಡುವಂತೆ ಸ್ಪೀಕರ್‌ಗೆ ಒತ್ತಾಯ ಮಾಡಿದ್ದೇವೆ. ಆದರೆ, ನಮಗೆ ಮಾತನಾಡಲು ಅವಕಾಶವನ್ನೇ ನೀಡದಿರುವ ಸ್ಪೀಕರ್ ವರ್ತನೆ ಸರಿ ಅಲ್ಲ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ದೇಶದ್ರೋಹಿಗಳ ಜತೆ ನಾವು ಕೂರುವುದಿಲ್ಲ

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸದನಕ್ಕೆ ಅಗೌರವ ತೋರಿದ್ದಾರೆ. ಸಂವಿಧಾನದ ಹೆಸರಲ್ಲಿ ಪ್ರಮಾಣ ಮಾಡಿದವರು ಒಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಂವಿಧಾನಕ್ಕೆ ಮಾಡಿರುವ ಅವಮಾನ. ಇಂತಹ ದೇಶದ್ರೋಹಿಗಳ ಜೊತೆ ಕಲಾಪದಲ್ಲಿ ಕುಳಿತುಕೊಳ್ಳಲು ನಾವು ಸಿದ್ಧರಿಲ್ಲ. ಅವರನ್ನು ಸದನದಿಂದ ತಕ್ಷಣ ಅಮಾನತು ಮಾಡಬೇಕು’

-ಸಿದ್ದರಾಮಯ್ಯ, ವಿಪಕ್ಷ ನಾಯಕ

‘ದೊರೆಸ್ವಾಮಿ ಪಾಕಿಸ್ತಾನದ ಏಜೆಂಟ್ ಎಂಬುದಕ್ಕೆ ಶಾಸಕ ಯತ್ನಾಳ್ ಸೂಕ್ತ ಸಾಕ್ಷಾಧಾರಗಳನ್ನು ನೀಡಬೇಕು. ಅಲ್ಲದೆ, ಅವರ ವಿರುದ್ಧ ಸ್ವಯಂ ಪ್ರೇರಣೆಯಿಂದ ಕೇಸು ದಾಖಲಿಸಬೇಕಿತ್ತು. ಅದ್ಯಾವುದು ಇಲ್ಲವಾದರೆ ಯತ್ನಾಳ್ ಕ್ಷಮೆ ಕೋರಬೇಕು. ಇಲ್ಲವೇ ಅವರನ್ನು ಅಮಾನತು ಮಾಡದಿದ್ದರೆ ಸದನದಲ್ಲಿ ನಮ್ಮ ಹೋರಾಟ ನಿಲ್ಲದು’

-ಸಿದ್ದರಾಮಯ್ಯ, ವಿಪಕ್ಷ ನಾಯಕ

ಯಾರು ಏನೇ ಹೇಳಿದರೂ ಏನೇ ಒತ್ತಡ ಬಂದರೂ, ನನ್ನ ಹೇಳಿಕೆಗೆ ನಾನು ಬದ್ಧ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಗೌರವವಿದೆ. ಆದರೆ, ನಕಲಿ ಹೋರಾಟಗಾರರ ಬಗ್ಗೆ ನನಗೆ ಗೌರವವಿಲ್ಲ. ನಾನು ಯಾವುದೇ ಸಂದರ್ಭದಲ್ಲಿಯೂ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ’
-ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ

‘ಶಾಸಕ ಬಸನಗೌಡ ಪಾಟೀಲ್ ಯತ್ನಾಳರು, ದೊರೆಸ್ವಾಮಿಯವರ ಕುರಿತು ಪಾಕ್ ಏಜೆಂಟ್ ಎಂದು ಹೇಳಿದ್ದು ಖಂಡಿತ ತಪ್ಪು. ಆದರೆ ಅವರು ಹಾಗೆ ಹೇಳಿದ್ದು ವಿಧಾನ ಸಭೆಯ ಹೊರಗೆ. ಆದರೆ ಅದನ್ನೇ ಸಿದ್ದರಾಮಯ್ಯನವರು ವಿಧಾನಸಭೆಯ ಒಳಗೆ ಮತ್ತೆ-ಮತ್ತೆ (ಹತ್ತು ಬಾರಿ) ಉಚ್ಛರಿಸಿದ್ದು ಸರಿಯೇ ?’

-ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News