ಅಧಿವೇಶನಕ್ಕೆ ಕಡ್ಡಾಯ ಹಾಜರಾಗಲು ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ
ಬೆಂಗಳೂರು, ಮಾ.2: ವಿಧಾನಸೌಧ ಅಧಿವೇಶನ ಹಿನ್ನೆಲೆ ಕಡ್ಡಾಯವಾಗಿ ಸದನದಲ್ಲಿ ಹಾಜರಾಗಿ, ಚರ್ಚೆಗಳಲ್ಲಿ ಭಾಗಿಯಾಗುವಂತೆ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಸೂಚಿಸಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಪ್ ಜಾರಿಗೊಳಿಸಿದ್ದಾರೆ.
ಮಂಗಳವಾರ ಸದನಲ್ಲಿ ಸಂವಿಧಾನ ಕುರಿತು ಚರ್ಚೆ ನಡೆಯಲಿದೆ.ಅದೇ ರೀತಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ವಿವಾದಿತ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನನೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರೆಸಲಿದ್ದು, ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಪಟ್ಟುಹಿಡಿಯಲಿದೆ.
ಸೋಮವಾರ ಕಲಾಪಕ್ಕೆ ಕಾಂಗ್ರೆಸ್ ಶಾಸಕರ ಸಂಖ್ಯೆ ಕಡಿಮೆಯಾಗಿತ್ತು. ಬಿಜೆಪಿ ಶಾಸಕರಿಗೆ ಅನುಗುಣವಾಗಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಕಡಿಮೆಯಿದ್ದದ್ದನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಮಂಗಳವಾರ ಎಲ್ಲ ಸದಸ್ಯರು ಕಡ್ಡಾಯವಾಗಿ ಕಲಾಪಕ್ಕೆ ಹಾಜರಾಗುವಂತೆ ವಿಪ್ ಜಾರಿಗೊಳಿಸಿರುವುದಾಗಿ ಹೇಳಲಾಗುತ್ತಿದೆ.
ಸಭೆ: ಯತ್ನಾಳ್ ವಿರುದ್ಧ ಹೋರಾಟದ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಮಂಗಳವಾರ ಮತ್ತೆ ಸಿಎಲ್ಪಿ ಸಭೆ ಕರೆದಿದ್ದಾರೆ. ಯಾವುದೇ ಕಾರಣಗಳಿದ್ದರೂ ಎಲ್ಲ ಶಾಸಕರು ಕಡ್ಡಾಯವಾಗಿ ಮಂಗಳವಾರದ ಕಲಾಪಕ್ಕೆ ಹಾಜರಾಗುವಂತೆ ಹೇಳಲಾಗಿದೆ.