ನಿಮ್ಮ ಟೀಕೆ ಜನಮತದ ಅಪಹಾಸ್ಯ: ಸಿಎಂ ಯಡಿಯೂರಪ್ಪ ತಿರುಗೇಟು
ಬೆಂಗಳೂರು, ಮಾ. 2: ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗಳೇ ಮುಖ್ಯ. ಈ ಸಂಖ್ಯಾ ಮೇಲಾಟದಲ್ಲಿ ನಮ್ಮ ಪಕ್ಷ ಗೆದ್ದಿದೆ ಎಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ, ನಿಮ್ಮ ಟೀಕೆ ಜನರ ಅಭಿಮತನವನ್ನು ಅಪಹಾಸ್ಯ ಮಾಡಿದಂತಾಗುತ್ತದೆ ಎಂದು ಇದೇ ವೇಳೆ ತಿರುಗೇಟು ನೀಡಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಫೆ.17ರಂದು ರಾಜ್ಯಪಾಲರು ಮಾಡಿದ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲಿನ ಚರ್ಚೆಗೆ ವಿಪಕ್ಷಗಳ ಧರಣಿ ಸತ್ಯಾಗ್ರಹ, ಗದ್ದಲದ ಮಧ್ಯೆ ಉತ್ತರ ನೀಡಿದ ಅವರು, ರಾಜ್ಯಪಾಲರ ಭಾಷಣದ ಮೇಲೆ ರಾಜಕೀಯ ಮಾಡುವುದು ನನಗೆ ಇಷ್ಟವಿಲ್ಲ. ಆದರೆ, ವಿಪಕ್ಷಗಳ ಟೀಕೆಗೆ ಉತ್ತರ ನೀಡಲೇಬೇಕು ಎಂದರು.
ಹದಿನೈದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದು ಜನರ ಬೆಂಬಲ ನಮ್ಮ ಪಕ್ಷಕ್ಕೆ ಇದೆ ಎಂಬುದನ್ನು ಸಾಬೀತು ಮಾಡಿದ್ದೇವೆ ಮತ್ತು ಈ 12 ಸ್ಥಾನಗಳಲ್ಲಿನ ಗೆಲುವು ನಮ್ಮ ಸರಕಾರದ ಮತ್ತು ಪಕ್ಷದ ನೈತಿಕ ಗೆಲುವಾಗಿದೆ. ನಿಮಗೆ ಗೊತ್ತಿರಲಿ ರಾಜ್ಯದ ಜನತೆ ಸಂಪೂರ್ಣ ನಮ್ಮ ಜೊತೆಗೆ ಇದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಹಣ ನಿಗದಿ: ಮಹದಾಯಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಆದೇಶ ಮಾಡಿದ್ದು, ಅದರನ್ವಯ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿರುವುದು ನಮಗೆ ದೊಡ್ಡ ಗೆಲುವಾಗಿದೆ. ಹೀಗಾಗಿ ಆಯವ್ಯಯದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಹಣ ನಿಗದಿಪಡಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಮನೆ ನಿರ್ಮಿಸಿಕೊಳ್ಳುವವರಿಗೆ 2ನೆ ಕಂತು 1ಲಕ್ಷ ರೂ.ಬಿಡುಗಡೆ ಪ್ರಾರಂಭಿಸಲಾಗಿದೆ. ಅಲ್ಲದೆ, ಹಾನಿ ಸಮುದ್ರದಷ್ಟಾದರೂ ಜನರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ಒದಗಿಸುವಲ್ಲಿ ನಮ್ಮ ಸರಕಾರ, ಅಧಿಕಾರಿಗಳು ಮತ್ತು ಸಚಿವರು ಸ್ಪಂದಿಸಿದ್ದಾರೆ ಎಂದು ಅವರು ಸಮರ್ಥಿಸಿದರು.