ಶಾಸಕ ಯತ್ನಾಳ್ ವಿರುದ್ಧದ ಹೋರಾಟ ಕೈಬಿಟ್ಟ ಕಾಂಗ್ರೆಸ್

Update: 2020-03-04 12:00 GMT

ಬೆಂಗಳೂರು, ಮಾ. 4: ‘ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕುರಿತ ಬಿಜೆಪಿ ಶಾಸಕ ಯತ್ನಾಳ್‌ರ ಅವಹೇಳನಕಾರಿ ಹೇಳಿಕೆ ವಿರುದ್ಧದ ನಮ್ಮ ಹೋರಾಟವನ್ನು ಕೈಬಿಟ್ಟಿದ್ದು, ರಾಜ್ಯದ ಹಿತದೃಷ್ಟಿಯಿಂದ ಧರಣಿ ಹಿಂಪಡೆದು ಕಲಾಪದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದೇವೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಪಕ್ಷ ಕಾಂಗ್ರೆಸ್ ಧರಣಿ, ಗದ್ದಲದಲ್ಲಿದ್ದ ವೇಳೆ ಸಂವಿಧಾನದ ಕುರಿತು ವಿಶೇಷ ಚರ್ಚೆಗೆ ಸ್ಪೀಕರ್ ಕಾಗೇರಿ ಅವಕಾಶ ನೀಡಲು ಮುಂದಾದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ಸ್ಪೀಕರ್ ಅವರಿಗೆ ಸೂಚನೆ ನೀಡಬೇಕೆಂದು ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ದೊರೆಸ್ವಾಮಿ ವಿರುದ್ಧ ಶಾಸಕ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧ. ಅಲ್ಲದೆ, ಸಂವಿಧಾನದ ನಿಯಮಗಳು ಮತ್ತು ಕರ್ತವ್ಯಗಳ ಉಲ್ಲಂಘನೆಯೂ ಆಗಿದೆ. ಈ ಬಗ್ಗೆ ಸದನದಲ್ಲಿ ಚರ್ಚೆಗೆ ಸ್ಪೀಕರ್‌ಗೆ ಮನವಿ ಮಾಡಲಾಗಿತ್ತು. ಆದರೆ, ಅವರು ತಿರಸ್ಕಾರ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಸಂವಿಧಾನದ 175ನೆ ಸೆಕ್ಷನ್‌ನಡಿ ರಾಜ್ಯಪಾಲರು ಸಂವಿಧಾನದ ರಕ್ಷಣೆ ಸಲುವಾಗಿ ಸ್ಪೀಕರ್‌ಗೆ ಸೂಚನೆ ನೀಡಬಹುದು. ಈ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯಪಾಲರು ಸ್ಪೀಕರ್ ಅವರಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದೇವೆ ಎಂದರು.

‘ರಾಜ್ಯಪಾಲರು ನಮ್ಮ ಮನವಿಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಸಂವಿಧಾನಾತ್ಮಕ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಯತ್ನಾಳ್ ಅವರಂತಹ ನಾಯಕರು ಇಂದಿನ ಸಮಾಜಕ್ಕೆ ಮಾದರಿ ಆಗಬಾರದು, ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಬೇಕು ಎಂಬ ಸಂದೇಶ ಸಮಾಜಕ್ಕೆ ತಲುಪಬೇಕೆಂಬುದಷ್ಟೇ ನಮ್ಮ ಉದ್ದೇಶ’ ಎಂದು ಸ್ಪಷ್ಟಪಡಿಸಿದರು.

ನಾವು ಧರಣಿಯಲ್ಲಿರುವ ವೇಳೆ ಸರಕಾರ ಹಲವು ಮಸೂದೆಗಳನ್ನು ಮಂಡಿಸಿದೆ. ಅಲ್ಲದೆ, ನಾಳೆ ಬಜೆಟ್ ಮಂಡನೆಯಾಗಲಿದ್ದು, ಹಲವು ಸದಸ್ಯರು ತಮ್ಮ ಕ್ಷೇತ್ರ ಮತ್ತು ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡಬೇಕೆಂಬ ಅಪೇಕ್ಷೆ ಹೊಂದಿದ್ದಾರೆ. ಹೀಗಾಗಿ ರಾಜ್ಯದ ಹಿತದೃಷ್ಟಿಯಿಂದ ನಮ್ಮ ಧರಣಿಯನ್ನು ಹಿಂಪಡೆಯುತ್ತೇವೆಂದು ಪ್ರಕಟಿಸಿದರು.

ಮಧ್ಯಪ್ರವೇಶಕ್ಕೆ ಆಗ್ರಹ: ‘ಬಿಜೆಪಿ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ, ಹಾಗಾಗಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅವರಿಗೆ ಎಳ್ಳಷ್ಟು ಗೌರವವಿಲ್ಲ. ಇದೊಂದು ಷಡ್ಯಂತ್ರವಾಗಿದ್ದು, ಯತ್ನಾಳ್ ಹೇಳಿಕೆಯ ಹಿಂದೆ ಬಿಜೆಪಿಯ ಹಲವು ನಾಯಕರ ಕುಮ್ಮಕ್ಕಿದೆ ಎಂಬ ಅನುಮಾನವಿದೆ. ರಾಜ್ಯಪಾಲರು ಕೂಡಲೇ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಜರುಗಿಸುವಂತೆ ಇಂದು ಮನವಿ ಮಾಡಿದ್ದೇವೆ ಎಂದು ಸಿದ್ದರಾಮಯ್ಯ, ರಾಜಭವನದ ಬಳಿ ಮಾಧ್ಯಮಗಳಿಗೆ ತಿಳಿಸಿದರು.

‘ನಾವು ಸ್ಪೀಕರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಿದ್ದೇವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿರುವುದು ಸತ್ಯಕ್ಕೆ ದೂರ. ಸಂವಿಧಾನದ ಪರಿಚ್ಚೇದ 175ರಡಿ ತಪ್ಪು ಮಾಡಿರುವ ಶಾಸಕರ ವಿರುದ್ಧ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಲು ರಾಜ್ಯಪಾಲರಿಗೆ ಅಧಿಕಾರ ಇದೆ. ಅದನ್ನಷ್ಟೇ ಕೇಳಿಕೊಂಡಿದ್ದೇವೆ. ಈ ಬಗ್ಗೆ ತಪ್ಪು ಮಾಹಿತಿ ಬೇಡ ಎಂದು ಅವರು ಸ್ಪಷ್ಟನೆ ನೀಡಿದರು.

‘ಶಾಸಕ ಯತ್ನಾಳ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದೇವೆ. ಸಂವಿಧಾನ- ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಯತ್ನಾಳ್ ಶಾಸಕರಾಗಿ ಮುಂದುವರೆಯುವ ಅರ್ಹತೆ ಕಳೆದುಕೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನಿಸುವುದು ಬಿಜೆಪಿ ಮತ್ತು ಸಂಘಪರಿವಾರದ ಸಂಸ್ಕೃತಿಯಾಗಿದೆ’ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ನಮ್ಮ ಪ್ರತಿಭಟನೆಯನ್ನು ಬಳಸಿಕೊಂಡು ಜನವಿರೋಧಿಯಾಗಿರುವ ಕೆಲವು ಮಹತ್ವದ ಮಸೂದೆಗಳಿಗೆ ಅಂಗೀಕಾರ ಪಡೆಯುವ ಹುನ್ನಾರವನ್ನು ಬಿಜೆಪಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಿತದೃಷ್ಟಿಯಿಂದ ನಮ್ಮ ಧರಣಿ ವಾಪಸು ಪಡೆದು ಕಲಾಪದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದೇವೆ ಎಂದರು.

ನಿಯೋಗದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಮೇಲ್ಮನೆ ವಿಪಕ್ಷ ನಾಯಕ ಎಸ್. ಆರ್.ಪಾಟೀಲ್, ರಮೇಶ್‌ ಕುಮಾರ್, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಕೃಷ್ಣಬೈರೇಗೌಡ, ಯು.ಟಿ.ಖಾದರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಬಿಜೆಪಿ ಮೂಲತಃ ಸಂವಿಧಾನ ವಿರೋಧಿ ಪಕ್ಷ. ಏಕಪಕ್ಷೀಯ ಚರ್ಚೆಯ ನೆಪದಲ್ಲಿ ಸಂವಿಧಾನದ ಬಗ್ಗೆ ಅವರು ಸುಳ್ಳು ಮಾಹಿತಿಯನ್ನು ನೀಡಿ ಜನರ ದಾರಿ ತಪ್ಪಿಸುವ ಸಾಧ್ಯತೆ ಇದೆ. ಈ ಕುತಂತ್ರವನ್ನು ವಿಫಲಗೊಳಿಸಲು ಚರ್ಚೆಯಲ್ಲಿ ಭಾಗವಹಿಸಲು ಧರಣಿ ವಾಪಸು ಪಡೆದಿದ್ದೇವೆ’

-ಸಿದ್ದರಾಮಯ್ಯ, ವಿಪಕ್ಷ ನಾಯಕ

ಜುಜುಬಿ ಕಾರಣಕ್ಕೆ ಧರಣಿ

‘ವಿಪಕ್ಷ ಕಾಂಗ್ರೆಸ್ ಸದಸ್ಯರು ಜುಜುಬಿ ಕಾರಣವನ್ನು ಮುಂದಿಟ್ಟುಕೊಂಡು ಮೂರು ದಿನ ಕಲಾಪದಲ್ಲಿ ಗದ್ದಲ ಸೃಷ್ಟಿಸಿ, ಸದನದ ಸಮಯ ಹಾಳು ಮಾಡಿದ್ದಲ್ಲದೆ, ಸ್ಪೀಕರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ಹೋಗಿದ್ದು ಅಕ್ಷಮ್ಯ, ಅವರು ಕ್ಷಮೆ ಕೋರಬೇಕು’

-ಅರಗ ಜ್ಞಾನೇಂದ್ರ, ಬಿಜೆಪಿ ಸದಸ್ಯ

‘ಕಾಂಗ್ರೆಸ್‌ಗೆ ಸಾಮಾನ್ಯ ಜ್ಞಾನವೂ ಇಲ್ಲ. ದೊರೆಸ್ವಾಮಿ ಸಮರ್ಥನೆ ಇವರಿಗೆ ಬೇಕಿರಲಿಲ್ಲ. ಹೀಗಾಗಿ ಬೇರೆ ರೂಪದಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು ಸದನದ ಸಮಯ ಹಾಳು ಮಾಡಿದ್ದಾರೆ. ಇವರು ರಾಜ್ಯಪಾಲರಿಗೆ ದೂರ ನೀಡುವ ಬದಲು ಸೋನಿಯಾ, ರಾಹುಲ್ ಬಳಿಗೆ ಹೋಗಬೇಕಿತ್ತು’

-ಜಗದೀಶ್ ಶೆಟ್ಟರ್, ಬೃಹತ್ ಕೈಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News