'ಇತಿಹಾಸ ತಿರುಚಬೇಡಿ': ತೀವ್ರ ಚರ್ಚೆಗೆ ಗ್ರಾಸವಾದ ಸಂವಿಧಾನ ಕುರಿತ ಸ್ಪೀಕರ್ ಕಾಗೇರಿ ಭಾಷಣ

Update: 2020-03-04 15:12 GMT

ಬೆಂಗಳೂರು, ಮಾ. 4: ‘ಮಂಗಳೂರು ಮೂಲದ ಬಿ.ಎನ್.ರಾವ್ ಎಂಬವರು ಸಂವಿಧಾನದ ಮೂಲ ಕರಡು ಪ್ರತಿಯನ್ನು ರಚಿಸಿ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾದ ಸಂವಿಧಾನದ ಕರಡು ಸಮಿತಿಗೆ ಸಲ್ಲಿಸಲಾಗಿತ್ತು’ ಎಂಬ ಸಂವಿಧಾನದ ಕುರಿತ ಸ್ಪೀಕರ್ ಕಾಗೇರಿ ಅವರ ಪ್ರಾಸ್ತಾವಿಕ ಭಾಷಣದಲ್ಲಿನ ಉಲ್ಲೇಖ ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.

ಬುಧವಾರ ವಿಧಾನಸಭೆಯಲ್ಲಿ ಸಂವಿಧಾನದ ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸಿನ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್, ಬಿ.ಎನ್.ರಾವ್ ಸಂವಿಧಾನದ ಕರಡನ್ನು ರಚನೆ ಮಾಡಿದ್ದಾರೆಂಬದು ತಪ್ಪು ಮಾಹಿತಿ. ಇತಿಹಾಸ ತಿರುಚುವ ಕೆಲಸ ಪೀಠದಲ್ಲಿ ಕೂತವರಿಂದ ಆಗಬಾರದು ಎಂದು ಮನವಿ ಮಾಡಿದರು.

ಕೂಡಲೇ ಮಧ್ಯಪ್ರವೇಶಿಸಿದ ಸ್ಪೀಕರ್, ಒಂದು ವೇಳೆ ಆಕಸ್ಮಿಕವಾಗಿ ತಪ್ಪಾಗಿದಲ್ಲಿ ಅದನ್ನು ತಿದ್ದುಪಡಿ ಮಾಡಿಕೊಳ್ಳುತ್ತೇವೆ. ಅಲ್ಲದೆ, ಉಲ್ಲೇಖಿತ ಪ್ಯಾರವನ್ನು ನನ್ನ ಭಾಷಣದಿಂದ ಕೈಬಿಡಲಾಗುವುದು ಎಂದು ಇದೇ ವೇಳೆ ಸ್ಪೀಕರ್ ಕಾಗೇರಿ ಸದನಕ್ಕೆ ಸ್ಪಷ್ಟನೆ ನೀಡಿದರು.

ಪೂರ್ವಾಶ್ರಮದ ಭಾಗ: ಬಳಿಕ ಮಾತು ಮುಂದುವರಿಸಿದ ಎಚ್.ಕೆ.ಪಾಟೀಲ್, ಸ್ಪೀಕರ್ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟ, ಸೇನಾನಿಗಳು ಹಾಗೂ ದೇಶದ ಮೊಟ್ಟ ಮೊದಲ ಪ್ರಧಾನಿ ನೆಹರೂ ಅವರ ಹೆಸರಿಲ್ಲ. ಅಲ್ಲದೆ, ಸ್ವಾತಂತ್ರ್ಯ, ಸಂವಿಧಾನ ಮತ್ತು ದೇಶದ ಪ್ರಶ್ನೆ ಬಂದಾಗ ಕಾಂಗ್ರೆಸ್ ಕೊಡುಗೆ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಈ ಬಗ್ಗೆ ಸ್ಪೀಕರ್ ಎಲ್ಲಿಯೂ ಉಲ್ಲೇಖಿಸದಿರುವುದು ಬೇಸರದ ಸಂಗತಿ ಎಂದು ಗಮನ ಸೆಳೆದರು.

ಕಾಂಗ್ರೆಸ್‌ನ ನೈಜ ಹೋರಾಟದ ಬಗ್ಗೆ ಎಲ್ಲರಿಗೂ ಕೃತಜ್ಞತಾ ಭಾವನೆ ಇರಬೇಕು. ಆದರೆ, ಸ್ಪೀಕರ್ ಕಾಗೇರಿ ಅವರಿಗೆ ತಮ್ಮ ಪೂರ್ವಾಶ್ರಮದ ಹಿನ್ನೆಲೆ ಕಾರಣಕ್ಕೆ ಅವರ ರಾಜಕೀಯ ಮನಸ್ಸು ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ನೆನಪು ಮಾಡಿಕೊಳ್ಳಲು ತಡೆದಿದೆ ಎಂದು ಪಾಟೀಲ್, ಸ್ಪೀಕರ್ ವಿರುದ್ಧ ನೇರವಾಗಿ ದೂರಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಂವಿಧಾನದ ಕರಡು ಸಮಿತಿಯಲ್ಲಿ 7 ಜನ ಸದಸ್ಯರಿದ್ದರು. ಆ ಪೈಕಿ ಒಬ್ಬರು ನಿಧನರಾಗಿದ್ದು ಒಬ್ಬರು ಅಮೆರಿಕಾದಲ್ಲಿದ್ದರು. ಇಬ್ಬರು ಸಭೆ ಹೋಗುತ್ತಿರಲಿಲ್ಲ. ಉಳಿದವರು ಬೇರೆ ಬೇರೆ ಕಾರಣಗಳಿಂದಾಗಿ ಸಕ್ರಿಯರಾಗಿರಲಿಲ್ಲ. ಹೀಗಾಗಿ ಡಾ.ಅಂಬೇಡ್ಕರ್ ಅವರೊಬ್ಬರೆ ಶ್ರಮಿಸಿ ಸಂವಿಧಾನ ರಚನೆ ಮಾಡಿದರು ಎಂದು ನೆನಪಿಸಿದರು.

‘ಸಂವಿಧಾನದ ರಚನೆ ಹಿಂದೆ ಡಾ.ಅಂಬೇಡ್ಕರ್ ಅವರ ಶ್ರಮ ಅಪಾರವಾದುದು. ಸಮಿತಿಯಲ್ಲಿದ್ದ 7 ಜನರಲ್ಲಿ ಎಲ್ಲರೂ ಗೈರು ಹಾಜರಾಗಿದ್ದ ಸಂದರ್ಭದಲ್ಲಿ ಸಂವಿಧಾನ ರಚನೆ ಮಾಡಿದರು. ಹೀಗಾಗಿ ಅಂಬೇಡ್ಕರ್ ಅವರ ಶ್ರಮ ಅದ್ವಿತೀಯ. ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯಯುತ ಹಕ್ಕುಗಳು ದಕ್ಕಬೇಕೆಂಬ ಕಾರಣಕ್ಕೆ ಅವರು ಅವಿರತ ಶ್ರಮಿಸಿದ್ದಾರೆಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಎಲ್ಲ ಗೌರವವೂ ಡಾ.ಅಂಬೇಡ್ಕರ್ ಅವರಿಗೆ ಸಲ್ಲಬೇಕು’

-ಯಡಿಯೂರಪ್ಪ, ಮುಖ್ಯಮಂತ್ರಿ

‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೇ ಸಂವಿಧಾನ ರಚನೆ ಸಿದ್ಧತೆ ನಡೆದಿತ್ತು. ಆದರೆ, ಸಂವಿಧಾನ ಕೇಂದ್ರಿತವಾಗಿ ನಾನು ಪ್ರಾಸ್ತಾವಿಕ ಮಾತುಗಳನ್ನು ಹೇಳಿದ್ದೇನೆ. ಅಂದರೆ, ಸ್ವಾತಂತ್ರ್ಯ ಹೋರಾಟ, ಹೋರಾಟಗಾರರಿಗೆ ಪ್ರಾಮುಖ್ಯತೆ ಇಲ್ಲ ಎಂದು ಯಾರೂ ಭಾವಿಸಬೇಕಿಲ್ಲ’

-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News