ದೊರೆಸ್ವಾಮಿಗೆ ಧಿಕ್ಕಾರ ಕೂಗಿದ ಪ್ರಕರಣ: ನೀತಿ-ನಿರೂಪಣಾ ಸಮಿತಿಗೆ ವರ್ಗಾಯಿಸಲು ಆಗ್ರಹ

Update: 2020-03-04 12:45 GMT

ಬೆಂಗಳೂರು, ಮಾ.4: ಪರಿಷತ್‌ನ ಬಿಜೆಪಿ ಸದಸ್ಯ ರವಿಕುಮಾರ್ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯ ಬಗ್ಗೆ ಅಪಮಾನಕರವಾಗಿ ಮಾತನಾಡಿದ್ದ ಪ್ರಕರಣವನ್ನು ನೀತಿ, ನಿರೂಪಣಾ ಸಮಿತಿಗೆ ವರ್ಗಾವಣೆ ಮಾಡಬೇಕು ಎಂದು ಪರಿಷತ್‌ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಆಗ್ರಹಿಸಿದರು.

ಬುಧವಾರ ವಿಧಾನಪರಿಷತ್‌ನಲ್ಲಿ ಸದನ ಆರಂಭವಾಗುತ್ತಿದ್ದಂತೆಯೇ ವಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ರವಿಕುಮಾರ್ ದೊರೆಸ್ವಾಮಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ಬಗ್ಗೆ ವಿಷಾಧ ವ್ಯಕ್ತಪಡಿಸಬೇಕು ಎಂದು ಪಟ್ಟುಹಿಡಿದರು. ಆದರೆ, ರವಿಕುಮಾರ್ ಯಾವುದೇ ಕಾರಣಕ್ಕೂ ವಿಷಾದ ವ್ಯಕ್ತಪಡಿಸಲ್ಲ ಎಂದರು.

ಮಂಗಳವಾರ ರವಿಕುಮಾರ್ ಹಾಗೂ ತೇಜಸ್ವಿನಿ 'ದೊರೆಸ್ವಾಮಿಗೆ ಧಿಕ್ಕಾರ, ನಾಚಿಕೆಯಾಗಬೇಕು, ಕೊಲೆಪಾತಕರಿಗೆ ಬೆಂಬಲ ನೀಡಬೇಕಾ' ಎಂದೆಲ್ಲಾ ಮಾತನಾಡಿದ್ದರು. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ್ದ ಅವಮಾನವಾಗಿದೆ. ಇದನ್ನೆಲ್ಲಾ ನೋಡಿಕೊಂಡು ನಾವು ಸುಮ್ಮನೆ ಕುಳಿತಿರಬೇಕಾ ಎಂದು ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. ಆಗ ಸಭಾಪತಿ ರವಿಕುಮಾರ್‌ಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು. ಈ ವೇಳೆ ಎದ್ದುನಿಂತ ಅವರು, ಸೃಷ್ಟೀಕರಣ ನೀಡಲು ಮುಂದಾದರು. ಆಗ ಸಾವರ್ಕರ್ ಇತಿಹಾಸ ಹೇಳಲು ಆರಂಭಿಸಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು, ಇತಿಹಾಸ ಎಲ್ಲ ಬೇಡ ವಿಷಾದ ವ್ಯಕ್ತಪಡಿಸುವಂತೆ ಆಗ್ರಹಿಸಿದರು.

ಆದರೆ, ವಿಪಕ್ಷಗಳ ಗದ್ದಲದಲ್ಲಿಯೇ ರವಿಕುಮಾರ್ ಮಾತು ಮುಂದುವರಿಸುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ವಿಪಕ್ಷಗಳ ಸದಸ್ಯರು ಬೇಕು ಬೇಕು ನ್ಯಾಯ ಬೇಕು, ಧಿಕ್ಕಾರ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು. ಇದೇ ವೇಳೆ ಆಡಳಿತ ಪಕ್ಷದವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡುತ್ತಿರುವವರಿಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿ ಪ್ರತಿರೋಧ ತೋರಿದರು. ಈ ನಡುವೆ ಮಧ್ಯಪ್ರವೇಶಿಸಿದ ಸಭಾಪತಿ ಪ್ರತಾಪ ಚಂದ್ರಶೆಟ್ಟಿ, ರವಿಕುಮಾರ್‌ಗೆ ನೇರವಾಗಿ ವಿಷಯಕ್ಕೆ ಬರುವಂತೆ ಸೂಚಿಸಿದರು. ಆದರೂ, ಅವರು ಮತ್ತೆ ಸಾವರ್ಕರ್‌ರ ಇತಿಹಾಸ ಹೇಳಲು ಆರಂಭಿಸಿದರು. ಆಗ ಎದ್ದು ನಿಂತ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ರವಿಕುಮಾರ್‌ರ ಭಾಷಣ ನೋಡಿದರೆ ಅವರಿಗೆ ಸದನ ನಡೆಸುವ ಇರಾದೆಯಿಲ್ಲ ಎಂದು ಹೇಳುತ್ತಲೇ, 242 ಬಿ ಅಡಿಯಲ್ಲಿ ಅವರ ಪ್ರಕರಣವನ್ನು ನೀತಿ ನಿರೂಪಣಾ ಸಮಿತಿಗೆ ವರ್ಗಾಯಿಸಬೇಕೆಂದು ಮನವಿ ಮಾಡಿದರು. ಪ್ರಕರಣವನ್ನು ಸಮಿತಿಗೆ ವರ್ಗಾಯಿಸುತ್ತೇನೆ ಎಂದು ಘೋಷಿಸಿದರೆ ಪ್ರತಿಭಟನೆ ವಾಪಸ್ ಪಡೆಯುತ್ತೇವೆ ಎಂದು ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ಸಭಾಪತಿ, ನಿಯಮ 242 ಬಿ ಅಡಿ ನೀತಿ ನಿರೂಪಣೆ ಸಮಿತಿ ಬರುತ್ತದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಈ ನಡುವೆ ಮಧ್ಯಪ್ರವೇಶಿಸಿದ ಸಭಾನಾಯಕ ಕೋಟಾ ಶ್ರೀನಿವಾಸಪೂಜಾರಿ, ಇದನ್ನು ಸಮಿತಿಗೆ ಯಾವುದೇ ಕಾರಣಕ್ಕೂ ನೀಡಬಾರದು ಎಂದು ಸಭಾಪತಿಯನ್ನು ಒತ್ತಾಯಿಸಿದರು. ಇದಕ್ಕೆ ಮತ್ತಿತರೆ ಬಿಜೆಪಿ ಸದಸ್ಯರು ಬೆಂಬಲ ಸೂಚಿಸಿದರು. ಆದರೆ, ಸಭಾಪತಿ ಅವರ ಬೇಡಿಕೆಯನ್ನು ತಳ್ಳಿ ಹಾಕಿದರು. ಅಲ್ಲದೆ, ನೀವು ಬೇಕು, ಬೇಡ ಎಂದು ಹೇಳಲು, ತೀರ್ಮಾನ ಮಾಡಲು ಬರುವುದಿಲ್ಲ ಎಂದು ಸಭಾ ನಾಯಕರಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News