ಕೊರೋನ ವೈರಸ್ ಬಗ್ಗೆ ಅನಗತ್ಯ ಗೊಂದಲಕ್ಕೆ ಒಳಗಾಗಬೇಡಿ: ಆರೋಗ್ಯ ಸಚಿವ ಶ್ರೀರಾಮುಲು
ಬೆಂಗಳೂರು, ಮಾ.4: ಕೊರೋನ ವೈರಸ್ ಬಾಧಿತರ ಸಂಖ್ಯೆ ಹೆಚ್ಚಳ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿವರಗಳ ಬಗ್ಗೆ ಸಾರ್ವಜನಿಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲವೆಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಬುಧವಾರ ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೋನ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಜನತೆ ಆರೋಗ್ಯ ಇಲಾಖೆಯಿಂದ ಬಿಡುಗಡೆಯಾಗುವ ಅಧಿಕೃತ ಮಾಹಿತಿಯನ್ನು ಮಾತ್ರ ಪಡೆದುಕೊಳ್ಳಿ. ಅನಗತ್ಯ ಗೊಂದಲಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳನ್ನು ಹರಿಬಿಡಲಾಗುತ್ತಿದ್ದು, ಇಂತಹ ತಪ್ಪುಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಹೈದರಾಬಾದ್ ಮೂಲದ ಟೆಕ್ಕಿಯೊಬ್ಬರಿಂದ ರಾಜ್ಯದಲ್ಲಿ ಕೊರೋನ ವೈರಸ್ ಕಾಣಿಸಿಕೊಂಡಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಅವರು ತಂಗಿದ್ದ ಅಪಾರ್ಟ್‌ಮೆಂಟ್, ಅವರು ಕೆಲಸ ಮಾಡುತ್ತಿದ್ದ ಕಚೇರಿಯ 25 ಸಹೋದ್ಯೋಗಿಗಳನ್ನು ಸಂಪರ್ಕಿಸಲಾಗಿದೆ. ಈ ಪೈಕಿ ಒಬ್ಬರನ್ನು ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ತವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಹೊರದೇಶದಿಂದ ರಾಜ್ಯಕ್ಕೆ ಬಂದ 40 ಸಾವಿರ ಮಂದಿಯಲ್ಲಿ 251 ಮಂದಿಯ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ಇವರಲ್ಲಿ 238 ಮಂದಿಯಲ್ಲಿ ರೋಗ ಲಕ್ಷಣಗಳು ಪತ್ತೆಯಾಗಿಲ್ಲ. ಉಳಿದ 13ಮಂದಿಯ ವರದಿ ಈಗಷ್ಟೆ ಬರಬೇಕಿದೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.