ನೆರೆ ಪರಿಹಾರ ಬಿಜೆಪಿ ಜನಪ್ರತಿನಿಧಿಗಳು, ಕಾರ್ಯಕರ್ತರಿಗೆ ಹಂಚಿಕೆ: ಎಸ್.ಅರ್.ಪಾಟೀಲ್ ಆರೋಪ
ಬೆಂಗಳೂರು, ಮಾ.4: ನೆರೆ ಹಾವಳಿ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಬಿಜೆಪಿಯ ವಿವಿಧ ಸಂಘಟನೆಗಳಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅನುದಾನ ಬಿಡುಗಡೆ ಮಾಡಿದ್ದಾರೆನ್ನಲಾದ ವಿಷಯವು ವಿಧಾನ ಪರಿಷತ್‌ನಲ್ಲಿ ಚರ್ಚೆಗೆ ಗ್ರಾಸವಾಯಿತು.
ಬುಧವಾರ ವಿಧಾನಪರಿಷತ್‌ನಲ್ಲಿ ಮಧ್ಯಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ನ ಹಿರಿಯ ಸದಸ್ಯ ಬೋಸರಾಜ್ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ, ನೆರೆ ಪರಿಹಾರಕ್ಕೆ ಕೇಂದ್ರ ಸರಕಾರ ಕೊಟ್ಟ ಅಲ್ಪ ಮೊತ್ತವನ್ನು ರಾಜ್ಯ ಸರಕಾರ ಬಿಜೆಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ, ಬಿಜೆಪಿ ತಾಲೂಕು ಪಂಚಾಯತ್ ಅಧ್ಯಕ್ಷರ ಹೆಸರಿನಲ್ಲಿ ಹಂಚಿಕೆ ಮಾಡಿರುವುದು ಸರಿಯಲ್ಲವೆಂದು ಆರೋಪಿಸಿದರು.
ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಎಸ್.ಅರ್.ಪಾಟೀಲ್, ರಾಜ್ಯ ಸರಕಾರ ನೆರೆ ಪರಿಹಾರವನ್ನು ಕೇವಲ ಬಿಜೆಪಿಯ ಜನಪ್ರತಿನಿಧಿಗಳು ಹಾಗೂ ಆ ಪಕ್ಷದ ಕಾರ್ಯಕರ್ತರಿಗೆ ಹಂಚಿಕೆ ಮಾಡಿದ್ದಾರೆ. ಅದರ ಸಂಪೂರ್ಣವಾದ ಮಾಹಿತಿ ನನ್ನಲಿದೆ. ಅದೂ ಅಲ್ಲದೆ, ನೆರೆಗೆ ತುತ್ತಾದ ಪ್ರದೇಶಗಳಲ್ಲದ ಕಡೆಯ ಬಿಜೆಪಿ ನಾಯಕರಿಗೆ, ಸಂಘಟನೆಗಳಿಗೆ ಹಣ ಬಿಡುಗಡೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಬಿಜೆಪಿ ಸರಕಾರ ನೆರೆ ಪರಿಹಾರವನ್ನು ಈ ರೀತಿ ಅನಗತ್ಯವಾಗಿ ವ್ಯರ್ಥ ಮಾಡಿರುವುದರ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್‌ಗೆ ದೂರು ಸಲ್ಲಿಸಿದ್ದೆ. ಅವರು ಅದೇ ದಿನ ನನಗೊಂದು ಪತ್ರ ಬರೆದು ತನಿಖೆಗೆ ಒಪ್ಪಿಸಲಾಗಿದೆ ಎಂದು ಉತ್ತರ ನೀಡಿದ್ದರು. ಆದರೆ, ತನಿಖಾಧಿಕಾರಿಗಳು ಇಲ್ಲಿಯವರೆಗೂ ಅದರ ಕುರಿತು ಯಾವ ಮಾಹಿತಿಯನ್ನು ನೀಡಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿಯಾಗಿದೆ ಎಂದು ಅವರು ಖಂಡಿಸಿದರು.
ಈ ವೇಳೆ ಸಭಾ ನಾಯಕ ಶ್ರೀನಿವಾಸ ಪೂಜಾರಿ, ಹಿಂದಿನ ಸರಕಾರದ ಅವಧಿಯಲ್ಲಿಯೂ ಇದೇ ನಡೆದಿದೆ. ದುಡ್ಡು ಯಾರಿಗೆ ಕೊಟ್ಟಿದ್ದೇವೆ ಎಂಬುದು ಮುಖ್ಯ ಅಲ್ಲ. ಅದು ಸದ್ವಿನಿಯೋಗ ಆಗಿದೆಯೆ ಎಂಬುದನ್ನು ನೋಡಬೇಕೆಂದು ಹೇಳಿದರು. ಇದಕ್ಕೆ ಜೆಡಿಎಸ್‌ನ ಬೋಜೇಗೌಡ, ಕಾಂಗ್ರೆಸ್‌ನ ಪ್ರಕಾಶ್ ರಾಠೋಡ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿ, ಹಾಗಾದರೆ ಇಡೀ ಪರಿಹಾರದ ಹಣವನ್ನು ಬಿಜೆಪಿ ಕಾರ್ಯಕರ್ತರಿಗೆ ಹಂಚಿಕೆ ಮಾಡಿಬಿಡಿ ಎಂದು ವಾಗ್ವಾದಕ್ಕೆ ಇಳಿದರು. ಆಗ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ರಾಜ್ಯ ಸರಕಾರ ರಾಜ್ಯಪಾಲರ ಭಾಷಣಕ್ಕೆ ಉತ್ತರ ಕೊಡುವಾಗ ಈ ವಿಷಯಕ್ಕೆ ಪ್ರತಿಕ್ರಿಯೆ ನೀಡುತ್ತಾರೆಂದು ಹೇಳಿ ಎಲ್ಲ ಸದಸ್ಯರನ್ನು ಸಮಾಧಾನ ಪಡಿಸಿದರು.