ಸಿಎಎ, ಎನ್‌ಆರ್‌ಸಿ ವಿರೋಧಿಸಿ ಗಲಭೆ ಅನವಶ್ಯಕ: ಸಿಎಂ ಯಡಿಯೂರಪ್ಪ
ಬೆಂಗಳೂರು, ಮಾ.4: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಪ್ರಕ್ರಿಯೆಗಳನ್ನು ವಿರೋಧಿಸಿ, ಗಲಭೆ ನಡೆಸುವುದು ಅನವಶ್ಯಕ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬುಧವಾರ ಮಧ್ಯಾಹ್ನ ಭೋಜನ ವಿರಾಮದ ನಂತರ ವಿಧಾನಸಭೆಯಲ್ಲಿ ಭಾರತ ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಪ್ರಸ್ತಾಪಿಸಿದ ಅವರು, ಪ್ರತಿಭಟನೆ, ಪ್ರತಿರೋಧ ಸಂವಿಧಾನದ ಮೂಲಭೂತ ಹಕ್ಕು ಎಂದು ಹೇಳುತ್ತೇವೆ. ಆದರೆ, ಪ್ರಜಾಪ್ರಭುತ್ವದಲ್ಲಿ ಸಂಸತ್ತಿನಲ್ಲಿಯೇ ಕಾನೂನು ರಚನೆ ಮಾಡಿದ ಮೇಲೆ ಅದಕ್ಕೆ ಗೌರವ ಇದೆ. ಇದನ್ನು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಮರೆತಿವೆ ಎಂದು ದೂರಿದರು.
ಹಲವು ಜನ ಶಾಸಕರು, ವಕೀಲರಿಗೆ ಸಂವಿಧಾನ, ಸಂಸತ್ತು ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಗೊತ್ತಿದೆ ಎಂದ ಅವರು, ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಬಗ್ಗೆ ನಡೆಯುತ್ತಿರುವ ಗಲಭೆಗಳು ಅನವಶ್ಯಕ. ಸಿಎಎ ಕಾಯ್ದೆ ಸಂವಿಧಾನ ಮತ್ತು ಸಂಸತ್ತಿನ ಮೂಲಕ ಹೊರಗಡೆ ಬಂದಿದೆ ಎಂದರು.
ಸಂವಿಧಾನ ಬದಲಾವಣೆ ಅಸಾಧ್ಯ: ವಿಶ್ವದಲ್ಲಿಯೇ ಅತಿ ದೊಡ್ಡ ಲಿಖಿತ ಸಂವಿಧಾನ ಎನ್ನುವ ಹೆಗ್ಗಳಿಕೆ ಭಾರತೀಯ ಸಂವಿಧಾನಕ್ಕೆ ಇದೆ. ಅಷ್ಟೇ ಅಲ್ಲದೆ, ಜಗತ್ತಿನಲ್ಲಿಯೇ ಅತ್ಯುತ್ತಮ ಮತ್ತು ಮಾದರಿ ಸಂವಿಧಾನವಾಗಿದ್ದು, ಕೋಟ್ಯಂತರ ಜನಸಂಖ್ಯೆ ಇದ್ದರೂ, ಮುಕ್ತವಾಗಿ ಬದುಕು ಕಟ್ಟಿಕೊಳ್ಳಲು ನಮಗೆ ಸಂವಿಧಾನ ದೂರದರ್ಶಿತ ಫಲ ನೀಡಿದೆ. ಆದರೆ, ಇದನ್ನು ಬದಲಾವಣೆ ಮಾಡುವುದು ಅಸಾಧ್ಯ ಎಂದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೇಲೆ ವಿಶೇಷ ಗೌರವ ಏಕೆಂದರೆ, ಸಂವಿಧಾನ ರಚನೆ ಹಿಂದಿರುವ ಶ್ರಮ ಅವಿರತವಾಗಿದೆ. ನಮಗೆಲ್ಲಾ ಗೊತ್ತಿಲ್ಲದ ವಿಷಯ ಎಂದರೆ, ಸಮಿತಿ ಕೆಲ ಸದಸ್ಯರು ಗೈರಾಗಿದ್ದರು. ಆದರೂ, ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚನೆ ಪೂರ್ಣಗೊಳಿಸುತ್ತಾರೆ ಎನ್ನುವುದು ಹೆಮ್ಮೆಯ ಸಂಗತಿ. ಇದು ಅವರಿಗಿದ್ದ ಶೋಷಿತರು, ಬಡವರ ಮೇಲಿನ ಕಾಳಜಿ ಎತ್ತಿ ತೋರಿಸುತ್ತದೆ ಎಂದು ಯಡಿಯೂರಪ್ಪ ನುಡಿದರು.