ಸರಕಾರಿ ನೌಕರರು ಲಂಚ ಪಡೆಯುತ್ತಾರೆ ಎನ್ನುವುದು ಸತ್ಯ: ಸಿಎಂ ಯಡಿಯೂರಪ್ಪ
ಬೆಂಗಳೂರು, ಮಾ.4: ನೂರಕ್ಕೆ ಶೇ.63 ರಷ್ಟು ಸರಕಾರಿ ನೌಕರರು ಲಂಚ ಪಡೆಯುತ್ತಾರೆ ಎನ್ನುವ ಮಾತು ಸತ್ಯ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಬುಧವಾರ ವಿಧಾನಸಭಾ ಕಲಾಪದ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್, ಶೇ.63ರಷ್ಟು ಸರಕಾರಿ ನೌಕರರು ಲಂಚ ಪಡೆಯುತ್ತಾರೆಂದು ಆರೋಪಿಸಿದರು. ಮಧ್ಯಾಹ್ನ ಭೋಜನ ವಿರಾಮದ ನಂತರ ವಿಧಾನಸಭೆಯಲ್ಲಿ ಭಾರತ ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಪಾಟೀಲರ ಹೇಳಿಕೆಗೆ ಸಹಮತ ವ್ಯಕ್ತಪಡಿಸಿ ಅವರು ಮಾತನಾಡಿದರು.
ಶೇ.63ರಷ್ಟು ಸರಕಾರಿ ಉದ್ಯೋಗಿಗಳು ಲಂಚ ಪಡೆಯುತ್ತಾರೆಂಬುದು ನೂರಕ್ಕೆ ನೂರು ಸತ್ಯ. ಇದರೊಂದಿಗೆ ವರ್ಗಾವಣೆ ದಂಧೆ ಹೆಚ್ಚಾಗಿ ಹೋಗಿದೆ. ಇದಕ್ಕೆ ಜನಪ್ರತಿನಿಧಿಗಳಾದ ನಾವೆಲ್ಲರೂ ಕಾರಣ. ಇದನ್ನು ಕೊನೆಗಾಣಿಸುವ ಜವಾಬ್ದಾರಿಯೂ ನಮ್ಮ ಮೇಲೆಯೇ ಇದೆ ಎಂದು ನುಡಿದರು.
ವರ್ಗಾವಣೆ ದಂಧೆ ಭ್ರಷ್ಟಾಚಾರ ವ್ಯವಸ್ಥೆಗೆ ಮೂಲ ಕಾರಣ ಎಂಬುದು ನನ್ನ ಅಭಿಪ್ರಾಯ. ಶಾಸಕರು, ಜನಪ್ರತಿನಿಧಿಗಳು ಸಹಕಾರ ಕೊಟ್ಟರೆ ಇವುಗಳನ್ನು ಕೊನೆಗಾಣಿಸಿ, ಜನತೆಯ ಆಶೋತ್ತರಕ್ಕೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.