ಐಪಿಎಲ್ ನಿಗದಿಯಂತೆ ನಡೆಯಲಿದೆ, ಕೊರೋನ ವಿರುದ್ಧ ಮುನ್ನೆಚ್ಚರಿಕೆ: ಗಂಗುಲಿ

Update: 2020-03-06 18:39 GMT

ಹೊಸದಿಲ್ಲಿ, ಮಾ.6: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ‘ಬಹುತೇಕ ವೇಳಾಪಟ್ಟಿಯ ಪ್ರಕಾರವೇ’ ನಡೆಯಲಿದೆ. ವಿಶ್ವದಾದ್ಯಂತ ವ್ಯಾಪಕವಾಗಿ ಪಸರಿಸುತ್ತಿರುವ ಮಾರಣಾಂತಿಕ ಕೊರೋನ ವೈರಸ್ ಬಾಧಿಸದಂತೆ ತಡೆಯಲು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹೇಳಿದ್ದಾರೆ.

ಭಾರತ ಹಾಗೂ ಅಂತರ್‌ರಾಷ್ಟ್ರೀಯ ಸ್ಟಾರ್ ಆಟಗಾರರು ಭಾಗವಹಿಸುವ ದೇಶೀಯ ಟ್ವೆಂಟಿ-20 ಟೂರ್ನಿ ಐಪಿಎಲ್ ಮಾ.29ರಿಂದ ಮುಂಬೈನಲ್ಲಿ ಆರಂಭವಾಗಲಿದೆ. ಭಾರತದಲ್ಲೀಗ ಕೊರೋನ ವೈರಸ್ ಸೋಂಕು ತಗಲಿರುವ ಸಂಖ್ಯೆ 31ಕ್ಕೇರಿದೆ. ಇದರಲ್ಲಿ 16 ಮಂದಿ ಇಟಲಿ ಪ್ರಜೆಗಳಿದ್ದಾರೆ. ಜಾಗತಿಕವಾಗಿ ಕೊರೋನ ವೈರಸ್‌ನಿಂದ 3,300 ಜನರು ಸಾವನ್ನಪ್ಪಿದ್ದು,ಸುಮಾರು 85 ದೇಶಗಳ 1 ಲಕ್ಷಕ್ಕೂ ಮಿಕ್ಕಿ ಜನರಿಗೆ ಸೋಂಕು ತಗಲಿದೆ.

‘‘ಐಪಿಎಲ್ ನಿಗದಿಯಂತೆಯೇ ನಡೆಯಲಿದೆ. ಎಲ್ಲ ಕಡೆಯೂ ಟೂರ್ನಮೆಂಟ್‌ನಲ್ಲಿ ವೇಳಾಪಟ್ಟಿಯಂತೆಯೇ ನಡೆಯುತ್ತಿವೆ.ಇಂಗ್ಲೆಂಡ್ ಈಗಾಗಲೇ ಶ್ರೀಲಂಕಾದಲ್ಲಿದೆ. ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಆಗಮಿಸಲಿದೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ. ಕೌಂಟಿ ತಂಡಗಳು ವಿಶ್ವದಾದ್ಯಂತ ಪ್ರಯಾಣಿಸುತ್ತವೆ. ಕ್ರಿಕೆಟ್ ಆಡಲು ಆ ತಂಡ ಅಬುಧಾಬಿ, ಯುಎಇಗೆ ತೆರಳಲಿದೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ’’ ಎಂದು ಗಂಗುಲಿ ಹೇಳಿದ್ದಾರೆ.

ಆಟಗಾರರು ಹಾಗೂ ಕ್ರಿಕೆಟ್ ಅಭಿಮಾನಿಗಳು ವೈರಸ್‌ನಿಂದ ಬಾಧಿತವಾಗದಂತೆ ಯಾವ ಮುನ್ನಚ್ಚರಿಕೆವಹಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಗುಲಿ,‘‘ನಾವು ಎಲ್ಲ ಮುನ್ನಚ್ಚರಿಕಾ ಕ್ರಮ ತೆಗೆದುಕೊಳ್ಳಲಿದ್ದೇವೆ. ಹೆಚ್ಚುವರಿ ಕ್ರಮಗಳು ಏನೇನಿವೆ ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ವೈದ್ಯಕೀಯ ತಂಡ ಮಾತ್ರ ಈ ಕುರಿತು ನಮಗೆ ತಿಳಿಸಬೇಕಾಗಿದೆ. ವೈದ್ಯಕೀಯ ತಂಡ ಈಗಾಗಲೇ ಆಸ್ಪತ್ರೆಯೊಂದಿಗೆ ಸಂಪರ್ಕದಲ್ಲಿದೆ. ಎಲ್ಲವೂ ಲಭ್ಯವಿರಲಿದೆ. ವೈದ್ಯರು ಏನು ಹೇಳುತ್ತಾರೋ ಹಾಗೆಯೇ ನಡೆದುಕೊಳ್ಳುತ್ತೇವೆ. ವೈದ್ಯರು ವೃತ್ತಿಪರರು. ವೈದ್ಯಕೀಯಕ್ಕೆ ಸಂಬಂಧಿಸಿ ವೈದ್ಯಕೀಯ ತಂಡವೇ ವಿವರಣೆ ನೀಡುತ್ತದೆ. ಎಲ್ಲ ಟೂರ್ನಮೆಂಟ್ ಎಂದಿನಂತೆ ನಡೆಯಲಿವೆ’’ ಎಂದರು.

ಕೊರೋನ ವೈರಸ್‌ನಿಂದಾಗಿ ಹಲವು ಜಾಗತಿಕ ಟೂರ್ನಿಗಳು ರದ್ದಾಗಿವೆ. ಜಪಾನ್‌ನಲ್ಲಿ ನಡೆಯಬೇಕಾಗಿದ್ದ ಒಲಿಂಪಿಕ್ಸ್ ಟೆಸ್ಟ್ ಈಗಾಗಲೇ ರದ್ದಾಗಿದೆ.ಜುಲೈ-ಆಗಸ್ಟ್‌ನಲ್ಲಿ ನಿಗದಿಯಾಗಿರುವ ಟೋಕಿಯೊ ಒಲಿಂಪಿಕ್ಸ್ ನಡೆಯುವ ಬಗ್ಗೆಯೇ ಅನುಮಾನ ಮೂಡಿದೆ. ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಒಲಿಂಪಿಕ್ಸ್ ಯೋಜನೆಯ ಪ್ರಕಾರ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News