ರೈಲು ಯೋಜನೆಗೆ ಅಗತ್ಯ ಭೂಮಿ, ಹಣಕಾಸು ನೆರವು: ಸಿಎಂ ಯಡಿಯೂರಪ್ಪ
ಬೆಂಗಳೂರು, ಮಾ.7: ರಾಜ್ಯ ಸರಕಾರವು ರೈಲ್ವೆ ಯೋಜನೆಗಳಿಗೆ ಅಗತ್ಯ ಭೂಮಿ, ಹಣಕಾಸಿನ ನೆರವು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶನಿವಾರ ನಗರದ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಯಶವಂತಪುರ- ಕಾರವಾರ-ವಾಸ್ಕೋ ಮಾರ್ಗದ ನಡುವೆ ಸಂಚರಿಸುವ ನೂತನ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ಮಂಜೂರಾಗುವ ಎಲ್ಲ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸುತ್ತಿದ್ದೇವೆಂದು ತಿಳಿಸಿದರು.
ಈ ಹಿಂದೆ ಇದೇ ರೈಲು ಮಂಗಳೂರು ನಗರದ ಮೂಲಕ ವಾಸ್ಕೋಗೆ ತಲುಪಬೇಕಾಗಿತ್ತು. ಇದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ನೂತನ ರೈಲು ನೀಡಬೇಕೆಂಬುದು ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸದರು, ಶಾಸಕರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿದ ಪರಿಣಾಮವಾಗಿ ಯಶವಂತಪುರ-ಕಾರವಾರ ಮಾರ್ಗವಾಗಿ ವಾಸ್ಕೋಗೆ ನೂತನ ರೈಲು ಸಂಚಾರ ಆರಂಭವಾಗಿದೆ ಎಂದು ಅವರು ಹೇಳಿದರು.
ರೈಲ್ವೆ ಯೋಜನೆಗಳಿಗೆ ರಾಜ್ಯದಿಂದ ಭೂಮಿ ಅರ್ಧ ವೆಚ್ಚವನ್ನು ನೀಡುವುದಾಗಿ ಆಶ್ವಾಸನೆ ನೀಡಿದ್ದೆ. ಈ ಮೂಲಕ ರಾಜ್ಯದ ರೈಲ್ವೆ ಯೋಜನೆಗಳಿಗೆ ಸದಾ ಬೆಂಬಲ ಕೊಡುತ್ತೇವೆ. ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ಇನ್ನಷ್ಟು ಹೊಸ ರೈಲ್ವೆ ಯೋಜನೆಗಳು ಲಭಿಸಲಿ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಯಶವಂತಪುರ-ಕಾರವಾರ ಮಾರ್ಗವಾಗಿ ವಾಸ್ಕೋಗೆ ತಲುಪಲು ಹೊಸ ರೈಲು ಬೇಕೆಂದು ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಈ ಭಾಗದ ಜನತೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಸುರೇಶ್ ಅಂಗಡಿ ಸೇರಿದಂತೆ ಮತ್ತಿತರರು ಸ್ಪಂದಿಸಿ ರೈಲ್ವೆ ಸಂಚಾರಕ್ಕೆ ಅನುಮತಿ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಬಾಕ್ಸ್
ವಾಸ್ಕೊ ರೈಲು ಮಾರ್ಗ
ಯಶವಂತಪುರ-ಕಾರವಾರ-ವಾಸ್ಕೊ ಮಾರ್ಗದ ರೈಲು ಪ್ರತಿದಿನ ಸಂಜೆ 6 ಗಂಟೆಗೆ ಯಶವಂತಪುರದಿಂದ ಹೊರಟು ಕುಣಿಗಲ್ ಮೂಲಕ ರಾತ್ರಿ 9.15ಕ್ಕೆ ಹಾಸನ ತಲುಪಿ, ಬೆಳಗಿನ ಜಾವ 3ಕ್ಕೆ ಪಡೀಲ್ ತಲುಪಲಿದೆ. 5ಕ್ಕೆ ಉಡುಪಿ, 5.30ಕ್ಕೆ ಕುಂದಾಪುರ, 8.30ಕ್ಕೆ ಕಾರವಾರ ತಲುಪಿದ ಬಳಿಕ 10.30ಕ್ಕೆ ವಾಸ್ಕೊ ತಲುಪಲಿದೆ. ಅದೇ ರೀತಿ ವಾಸ್ಕೊದಿಂದ ಸಂಜೆ 5.30ಕ್ಕೆ ಹೊರಟು, 7.25ಕ್ಕೆ ಕಾರವಾರ, 9.30ಕ್ಕೆ ಕುಂದಾಪುರ, ರಾತ್ರಿ 10 ಗಂಟೆಗೆ ಉಡುಪಿ ತಲುಪಿ, ಬೆಳಗ್ಗೆ 8 ಗಂಟೆಗೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ.