'ದರಿದ್ರ ಸರಕಾರ' ಹೇಳಿಕೆ ಬಗ್ಗೆ ಸಿದ್ದರಾಮಯ್ಯಗೆ ಸಚಿವ ಬಿ.ಎ.ಬಸವರಾಜ ತಿರುಗೇಟು

Update: 2020-03-07 12:56 GMT

ಬೆಳಗಾವಿ, ಮಾ.7: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ದರಿದ್ರ ಸರಕಾರವಲ್ಲ, ಸುಭದ್ರ ಸರಕಾರ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದರಿದ್ರ ಸರಕಾರ ಅಧಿಕಾರದಲ್ಲಿ ಇದ್ದಿದ್ದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೆ 630 ಕೋಟಿ ರೂ.ಗಳ ಅನುದಾನ ಹೇಗೆ ಲಭ್ಯವಾಗುತ್ತಿತ್ತು ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಅತೀ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯಗೆ ವಸ್ತು ಸ್ಥಿತಿ ಎಲ್ಲವೂ ಗೊತ್ತಿದೆ. ಎಲ್ಲ ವಿಚಾರಗಳಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು, ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮಾತನಾಡಲಿ ಎಂದು ಬಸವರಾಜ ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ವಸ್ತುಸ್ಥಿತಿಗೆ ಹತ್ತಿರವಾದ, ಅತ್ಯುತ್ತಮವಾದ ಬಜೆಟ್ ಅನ್ನು ರಾಜ್ಯಕ್ಕೆ ನೀಡಿದ್ದಾರೆ. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಕೆಲವೆ ದಿನಗಳಲ್ಲಿ ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಂತಹ ಪ್ರವಾಹ ಉಂಟಾಯಿತು. ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿಯ ಸಮಸ್ಯೆ ತಲೆದೋರಿತ್ತು ಎಂದು ಅವರು ತಿಳಿಸಿದರು.

ಹಂತ ಹಂತವಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಎಲ್ಲವನ್ನೂ ಒಂದೇ ದಿನದಲ್ಲಿ ಸರಿಪಡಿಸಲು ಸಾಧ್ಯವಾಗುವುದಿಲ್ಲ ಎಂದು ಬಸವರಾಜ ಹೇಳಿದರು. ವಿರೋಧ ಪಕ್ಷದಲ್ಲಿರುವುದರಿಂದ ಸಿದ್ದರಾಮಯ್ಯ ಏನಾದರೂ ಹೇಳಲೇಬೇಕಲ್ಲ. ಇಲ್ಲದಿದ್ದರೆ, ಮುಖ್ಯಮಂತ್ರಿ ಹಾಗೂ ಅವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಜನ ಮಾತನಾಡಿಕೊಳ್ಳಬಹುದು. ಸಿದ್ದರಾಮಯ್ಯ ಮಾಡುವ ಎಲ್ಲ ಆರೋಪಗಳಿಗೆ ಯಡಿಯೂರಪ್ಪ ತಕ್ಕ ಉತ್ತರ ನೀಡುತ್ತಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News