ಯೋಜನೆ ರೂಪಿಸಲು ಜನಗಣತಿಯ ಅಂಕಿ-ಅಂಶಗಳು ಸಹಕಾರಿ: ಸಚಿವ ಆರ್.ಅಶೋಕ್
ಬೆಂಗಳೂರು,ಮಾ. 7: ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸರಕಾರ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಜನಗಣತಿಯ ಅಂಕಿ-ಅಂಶಗಳು ಸಹಕಾರಿ ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಧಾನ ಜನಗಣತಿ ಅಧಿಕಾರಿಗಳ ರಾಜ್ಯ ಮಟ್ಟದ ಪ್ರಥಮ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳಿಂದ ಹಿಡಿದು ವಿಧಾನಸಭಾ ಕ್ಷೇತ್ರದವರೆಗೂ ಜನಗಣತಿಯು ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.
ವಾರ್ಡ್ ಮತ್ತು ಕ್ಷೇತ್ರಗಳ ಮೀಸಲಾತಿ ನಿಗದಿಪಡಿಸಲು ಜನಗಣತಿ ಸಹಕಾರಿ. ರಾಜ್ಯದಲ್ಲಿ ಜನಗಣತಿ ಕಾರ್ಯಕ್ಕೆ 1.50ಲಕ್ಷ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು, 45 ದಿನಗಳ ಕಾಲ ಜನಗಣತಿ ನಡೆಯಲಿದೆ. ಜನಗಣತಿ ಕಾರ್ಯ ಕೈಗೊಳ್ಳುವ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ಅಶೋಕ್ ತಿಳಿಸಿದರು.
ಇದೇ ಮೊದಲ ಬಾರಿಗೆ ಕಾಗದ ರಹಿತವಾಗಿ ಮೊಬೈಲ್ ಆ್ಯಪ್ ಮೂಲಕ ಜನಗಣತಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜನರ ಆರ್ಥಿಕ ಸ್ಥಿತಿಯೂ ಗಣತಿ ಕಾರ್ಯದಿಂದ ತಿಳಿಯಲಿದ್ದು, ಸರಕಾರದ ಯೋಜನೆ ರೂಪಿಸಲು ಅನುಕೂಲ ಆಗಲಿದೆ ಎಂದು ಅಶೋಕ್ ನುಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಸರರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಕೇಂದ್ರ ಗೃಹ ಇಲಾಖೆ ಜನಗಣತಿ ಆಯುಕ್ತಾಲಯದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಸಂಜಯ್, ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಹಾಜರಿದ್ದರು.