×
Ad

ತುಂಬೆ ವೆಂಟೆಡ್ ಡ್ಯಾಂ: ಮುಳುಗಡೆ ಪ್ರದೇಶದ ರೈತರನ್ನು ವಿಶ್ವಾಸಕ್ಕೆ ಪಡೆದು ಸರ್ವೆ; ಸಚಿವ ಆರ್.ಅಶೋಕ್

Update: 2020-03-09 22:31 IST

ಬೆಂಗಳೂರು, ಮಾ. 9: ಬಂಟ್ವಾಳ ತಾಲೂಕಿನ ತುಂಬೆ ವೆಂಟೆಡ್ ಡ್ಯಾಂನಿಂದ ಮುಳುಗಡೆ ಪ್ರದೇಶದ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವೆ ಕಾರ್ಯ ಕೈಗೊಳ್ಳಲಾಗುವುದು. ಅಲ್ಲದೆ, ಉಳಿದ ರೈತರಿಗೆ ಕೋರ್ಟ್ ಕೇಸ್ ಇತ್ಯರ್ಥದ ಬಳಿಕ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.

ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಯು.ರಾಜೇಶ್ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ತುಂಬೆ ವೆಂಟೆಡ್ ಡ್ಯಾಂನ ಹಿನ್ನೀರಿನಿಂದ ಒಟ್ಟು 66.43 ಎಕರೆ ಜಮೀನು ಮುಳುಗಡೆ ಆಗುತ್ತದೆ. ಈಗಾಗಲೇ ಖರೀದಿಸಿದ ಭೂಮಿ ಪೈಕಿ 37 ಜನರಿಗೆ 9.87 ಕೋಟಿ ರೂ.ಪರಿಹಾರ ನೀಡಲಾಗಿದೆ. ಸರಕಾರದಿಂದ 17 ಕೋಟಿ ರೂ.ಮೊತ್ತ ಬಿಡುಗಡೆ ಮಾಡಲಾಗಿದ್ದು, 54 ಮಂದಿಗೆ ಪರಿಹಾರ ನೀಡಬೇಕಿದ್ದು, ಈ ಸಂಬಂಧದ ಪ್ರಕರಣ ಕೋರ್ಟ್‌ನಲ್ಲಿ ಬಾಕಿ ಇದೆ ಎಂದರು.

ಒಟ್ಟು 7 ಮೀಟರ್ ಎತ್ತರಕ್ಕೆ ನೀರು ಸಂಗ್ರಹಿಸಲು ಡ್ಯಾಂ ವಿನ್ಯಾಸ ಮಾಡಲಾಗಿದೆ. ಆದರೆ, 6 ಮೀಟರ್ ಎತ್ತರಕ್ಕೆ ನೀರು ಶೇಖರಣೆ ಮಾಡಲಾಗುತ್ತದೆ. ಚೌಗು ಪ್ರದೇಶ ಸಮೀಕ್ಷೆಗೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವೆ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ರಾಜೇಶ್ ನಾಯಕ್, ಸ್ಥಳೀಯ ರೈತರಿಗೆ ಮಾಹಿತಿ ನೀಡದೆ ಸರ್ವೆ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಜನತೆ ಗೊಂದಲದಲ್ಲಿ ಇದ್ದಾರೆ. ಹೀಗಾಗಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವೆ ಕೈಗೊಳ್ಳಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News