ಮಹಿಳಾ ವಿಮೋಚನೆಯೇ ಮೊದಲ ಗುರಿಯಾಗಲಿ

Update: 2020-03-09 18:03 GMT

ಮಹಿಳಾ ವಿಮೋಚನೆಯೆಂದಾಗ ಮಹಿಳೆಗೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಎಲ್ಲಾ ರೀತಿಯಲ್ಲೂ ಸಮಾನ ಸ್ಥಾನಮಾನಗಳು ಹಕ್ಕುಗಳು ನೈಸರ್ಗಿಕ ನ್ಯಾಯದಷ್ಟು ಸಹಜವಾಗಿ ಸಿಗುವಂತಾಗುವುದು ಎಂದೇ ಗ್ರಹಿಸಬೇಕು. ಇದನ್ನು ಸಾಕಾರಗೊಳಿಸಲು ಶ್ರಮ ಹಾಕದ ಯಾವುದೇ ಚಳವಳಿಗಳು ಆಳುವ ಶಕ್ತಿಗಳಿಗಷ್ಟೇ ಸಹಾಯ ಮಾಡುತ್ತವೆ ಬಿಟ್ಟರೆ ಮಹಿಳಾ ವಿಮೋಚನೆಗೆ ಪೂರಕವಾಗುವುದಿಲ್ಲ. ಮಹಿಳಾ ವಿಮೋಚನೆ ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವೆಂಬ ತಪ್ಪುಗ್ರಹಿಕೆ ಕೂಡ ಆಳವಾಗಿಯೇ ಇದೆ. ವಾಸ್ತವದಲ್ಲಿ ಮಹಿಳಾ ವಿಮೋಚನೆಯೆನ್ನುವುದು ಸಾಮಾಜಿಕ ನ್ಯಾಯ ಹಾಗೂ ಸಮಾಜೋಆರ್ಥಿಕ ಸಮಾನತೆಯನ್ನು ಬಯಸುವ ಎಲ್ಲರ ಕರ್ತವ್ಯವಾಗಿದೆ. ದೇಶದ ಅಧರ್ದಷ್ಟು ಇರುವ ಮಹಿಳಾ ಸಮೂಹದ ವಿಮೋಚನೆಯಿಲ್ಲದೆ ಯಾವುದೇ ಸಮಾನತೆಯೂ ಸಾಕಾರಗೊಳ್ಳಲು ಸಾಧ್ಯವಾಗುವುದಿಲ್ಲ.


2020ರ ಮಾರ್ಚ್ ಎಂಟು ಕಳೆದು ಹೋಯಿತು. ಜಾಗತಿಕವಾಗಿ ಮಹಿಳಾ ದಿನಾಚರಣೆಯ ವಿವರಗಳು ಬರುತ್ತಿವೆ. ಹಲವೆಡೆ ಮಹಿಳಾ ಸಮೂಹ ಬೀದಿಗಿಳಿದು ಭಾರೀ ಪ್ರತಿಭಟನೆಗಳನ್ನು ನಡೆಸಿವೆೆ. ಫೆಲೆಸ್ತೀನ್, ಫಿಲಿಪೀನ್ಸ್, ಆಸ್ಟ್ರೇಲಿಯ, ಪಾಕಿಸ್ತಾನ, ಮೆಕ್ಸಿಕೋ, ಇರಾಕ್, ಬ್ರಿಟನ್, ಅಮೆರಿಕ, ಜರ್ಮನಿ, ಸ್ಪೇನ್, ಕಿರ್ಗಿಸ್ತಾನ್ ಮೊದಲಾದ ಕಡೆಗಳಲ್ಲಿ ಮಹಿಳೆಯರು ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿದ್ದಾರೆ. ಲಿಂಗ ಅಸಮಾನತೆ, ಪ್ರಭುತ್ವ ಹಿಂಸೆ, ವೇತನ ತಾರತಮ್ಯ ಹಾಗೂ ಮಹಿಳೆಯರ ಮೇಲಿನ ಹಿಂಸೆಗಳ ವಿರುದ್ಧ ದನಿಯೆತ್ತಿ ಪ್ರದರ್ಶನಗಳನ್ನು ನಡೆಸಿದ್ದಾರೆ. ಹಲವಾರು ಕಡೆಗಳಲ್ಲಿ ಪ್ರತಿಭಟಿಸುತ್ತಿದ್ದ ಮಹಿಳೆಯರನ್ನು ಬಂಧಿಸಿರುವ ವರದಿಗಳಿವೆ. ಪ್ರಪಂಚದ ಹಲವಾರು ಕಡೆಗಳಲ್ಲಿ ಬಂದ್‌ಗಳು ನಡೆದಿವೆ. ಅಂತರ್‌ರಾಷ್ಟ್ರೀಯ ಮಹಿಳಾ ದಿನವೆಂದಾಗ ಮಹಿಳಾ ಸಮೂಹ ತನ್ನ ಅಸ್ತಿತ್ವ, ಅಸ್ಮಿತೆ ಹಾಗೂ ಎಲ್ಲಾ ರೀತಿಯ ಸಮಾನತೆಯ ಹಕ್ಕೊತ್ತಾಯಗಳನ್ನಿಟ್ಟು ತಮ್ಮ ವಿಮೋಚನೆಯನ್ನು ಸಾಕಾರಗೊಳಿಸುವ ಗುರಿಯೊಂದಿಗೆ ಆಚರಿಸುವ ದಿನ. ಸಮಾನತೆಯೆಂದಾಗ ಅದು ಲಿಂಗ ಸಮಾನತೆ ಹಾಗೂ ವರ್ಗ ಸಮಾನತೆಯ ವಿಚಾರವನ್ನಾಗಿಯೇ ನೋಡಲಾಗಿತ್ತು. ವರ್ಗ ಸಮಾನತೆ ಇಲ್ಲದೆ ಲಿಂಗ ಸಮಾನತೆ ಅಸಾಧ್ಯ ಎಂಬ ಗ್ರಹಿಕೆಯಿತ್ತು. ಆದರೆ ಬರಬರುತ್ತಾ ಮಹಿಳಾ ದಿನಾಚರಣೆ ಎನ್ನುವುದು ಆಳುವ ಹಿತಾಸಕ್ತಿಗಳ ಕಾಪಾಡುವ ಆಚರಣೆಯಾಗಿ ದುಡಿಯುವ ಮಹಿಳೆ ಹಾಗೂ ದುಡಿಯುವ ಪುರುಷ ಐಕ್ಯತೆಯ ಗ್ರಹಿಕೆ ಬದಲಾಯಿತು. ಪುರುಷಾಧಿಪತ್ಯದ ಬದಲಿಗೆ ಪುರುಷರ ವಿರುದ್ಧ ಮಹಿಳೆ ಎಂದೂ ಮಾಡಲಾಯಿತು. ಭಾರೀ ಕಾರ್ಪೊರೇಟ್‌ಗಳ ಸರಕು ಮಾರಾಟವನ್ನು ಪ್ರಾಯೋಜಿಸುವ ದಿನವನ್ನಾಗಿಸಲಾಯಿತು.

ಇಂಡಿಯಾದಲ್ಲಿ ಇಂದಿನ ಸ್ಥಿತಿಯನ್ನು ಯಾವ ಮಟ್ಟದಲ್ಲಿ ನಿರ್ಮಾಣ ಮಾಡಿಡಲಾಗಿದೆ ಎಂದರೆ ಮಹಿಳೆಯರು ತಮ್ಮ ಪೌರತ್ವ ಕಾಪಾಡಿಕೊಳ್ಳಲಿಕ್ಕಾಗಿಯೇ ಬೀದಿಗಿಳಿಯಬೇಕಾಗಿ ಬಂದಿದೆ.

ಶಾಹೀನ್‌ಬಾಗ್ ಮಾದರಿ ಹುಟ್ಟುಹಾಕಿ ಸಾವಿರಾರು ಮಹಿಳೆಯರು ಇಂದು ಕೇಂದ್ರ ಸರಕಾರ ಜಾರಿಗೊಳಿಸುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ನಿರಂತರವಾಗಿ ಹಗಲು ರಾತ್ರಿ ಧರಣಿ ನಡೆಸುತ್ತಿದ್ದಾರೆ. ದೇಶಾದ್ಯಂತ ಪ್ರತಿಭಟನಾ ಪ್ರದರ್ಶನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದಾರೆ. ಮುಂಚೂಣಿ ಪಾತ್ರವನ್ನು ವಹಿಸುತ್ತಿದ್ದಾರೆ. ಒಂದು ವರದಿಯಂತೆ ದೇಶಾದ್ಯಂತ ಸುಮಾರು 250ಕ್ಕೂ ಹೆಚ್ಚು ಶಾಹೀನ್‌ಬಾಗ್ ಮಾದರಿಯಲ್ಲಿ ನಿರಂತರವಾಗಿ ರಾತ್ರಿ ಹಗಲೂ ಧರಣಿ ಪ್ರತಿಭಟನೆಗಳು ನಡೆಯುತ್ತಿವೆ. ಕರ್ನಾಟಕದಲ್ಲೂ ಹಲವು ಕಡೆ ಅಂತಹುದೇ ಹೋರಾಟಗಳು ನಡೆಯುತ್ತಿವೆ.

ಅವರನ್ನು ಧೃತಿಗೆಡಿಸಿ ಹೋರಾಟವನ್ನು ಭಗ್ನಗೊಳಿಸುವ ಪ್ರಭುತ್ವ ಹಾಗೂ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಗುಂಪುಗಳು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿವೆ. ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ದಾಳಿ ಹಾಗೂ ನರಮೇಧಗಳು, ಮೇಘಾಲಯದಲ್ಲಿ ಇತ್ತೀಚೆಗೆ ನಡೆದ ದಾಳಿಗಳು ಇದರ ಭಾಗವೇ ಆಗಿವೆ. ಧರಣಿ ನಿರತರ ಮೇಲೆ ಗುಂಡಿನ ದಾಳಿಗಳನ್ನೂ ಕೂಡ ಆಯೋಜಿಸಲಾಗಿತ್ತು. ಇವೆಲ್ಲದರ ನಡುವೆಯೂ ಮೂರು ತಿಂಗಳುಗಳಿಂದ ಹೋರಾಟ ತನ್ನ ನಿರಂತರತೆಯ ಜೊತೆಗೆ ವ್ಯಾಪ್ತಿಯನ್ನೂ ಹೆಚ್ಚಿಸಿಕೊಂಡು ಮುನ್ನಡೆಯುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಳಲ್ಲಿ ನೂರಾರು ಪ್ರಾಣಗಳು ಹೋಗಿವೆ, ಅದರ ಸರಿಯಾದ ಅಧಿಕೃತ ವರದಿಗಳು ಸಿಗುತ್ತಿಲ್ಲ. ಸಾವಿರಾರು ಜನರು ಗಂಭೀರ ಗಾಯಗಳಿಗೊಳಗಾಗಿದ್ದಾರೆ. ಸಾವಿರಾರು ಜನರು ಜೈಲು ಪಾಲಾಗಿದ್ದಾರೆ. ಹಲವರ ಮೇಲೆ ನೂರೆಂಟು ಪ್ರಕರಣಗಳನ್ನು ದಾಖಲಿಸಲಾಗಿದೆ. ಇವೆಲ್ಲದರ ನಡುವೆಯೇ ಹೋರಾಟ ಮುನ್ನಡೆಯುತ್ತಿದೆ. ದೇಶದಾದ್ಯಂತ ಇವೆಲ್ಲಾ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ವಿದ್ಯಾರ್ಥಿಗಳು, ಯುವ ಸಮೂಹ, ಇನ್ನಿತರರು ಪೌರತ್ವ ತಿದ್ದುಪಡಿ ಕಾಯ್ದೆಯಂತಹ ಕರಾಳ ಕಾಯ್ದೆಗಳ ವಿರುದ್ಧ ಬೀದಿಗಿಳಿದು ಹೋರಾಡುತ್ತಿದ್ದಾರೆ.

ಪ್ರಸಾಧನ, ಉಡುಗೆ ತೊಡುಗೆ, ವಿನ್ಯಾಸಗಳ ಮಾರುಕಟ್ಟೆ ವಿಸ್ತರಣೆಯ ಅವಕಾಶವನ್ನಾಗಿ ಕಾರ್ಪೊರೇಟ್‌ಗಳು ಮಹಿಳಾ ದಿನಾಚರಣೆಯನ್ನು ಬಳಸತೊಡಗಿ ಬಹಳ ಕಾಲವಾಗಿದೆ. ಮಾಧ್ಯಮಗಳಲ್ಲಿ ಮಹಿಳಾ ದಿನಾಚರಣೆಯ ಶುಭಾಶಯಗಳ ಮೂಲಕ ತಮ್ಮ ಸರಕುಗಳತ್ತ ಮಹಿಳೆಯರನ್ನು ಸೆಳೆಯುವ ಹಿತಾಸಕ್ತಿ ಮಾತ್ರ ಅಲ್ಲಿರುತ್ತದೆ.

ಹಲವು ಸಂಘಟನೆಗಳು ಮಹಿಳಾ ದಿನಾಚರಣೆಯನ್ನು ಬಹುಸಂಖ್ಯಾತ ಮಹಿಳೆಯರ ಮೂಲಭೂತ ಸಮಸ್ಯೆ ಸಂಕಟಗಳ ಬಗ್ಗೆ ಚಕಾರವೆತ್ತದ ಮೇಲ್ಮಟ್ಟದಲ್ಲಿ ಮಹಿಳಾ ಸಮಾನತೆಯ ಆಶಯಗಳ ಕಾರ್ಯಕ್ರಮಗಳನ್ನಾಗಿ ಆಚರಿಸುತ್ತವೆ. ರಂಗೋಲಿ, ಅಡುಗೆ, ನೃತ್ಯ, ಫ್ಯಾಷನ್ ಶೋಗಳಂತಹ ಕಾರ್ಯಕ್ರಮಗಳನ್ನೂ ಇದೇ ಹೆಸರಿನಲ್ಲಿ ಆಯೋಜಿಸುತ್ತವೆ.

ಹಲವು ಸಂಘಟನೆಗಳು ಮಹಿಳೆಯರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪುರುಷರೇ ಕಾರಣವೆಂದು ಬಿಂಬಿಸುತ್ತಾ ಸಮಾಜದ ಇಲ್ಲವೇ ಪುರುಷರ ಮನಸ್ಥಿತಿ ಬದಲಾವಣೆಯೊಂದಿಗೆ ಮಹಿಳಾ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎನ್ನುವಲ್ಲಿಗೆ ಮಹಿಳಾ ಸಮಾನತೆಯನ್ನು ತಂದು ನಿಲ್ಲಿಸಿಬಿಡುತ್ತವೆ. ಸಮಾಜದ ಇಲ್ಲವೇ ಪುರುಷರ ಮನಸ್ಸುಗಳು ಹೇಗೆ ಬದಲಾಗಲು ಸಾಧ್ಯ, ಯಾರು ಬದಲಾಯಿಸಬೇಕು ಎಂಬೆಲ್ಲಾ ಪ್ರಶ್ನೆಗಳನ್ನು ಹಾಕಿಕೊಳ್ಳುವುದಾಗಲೀ ಉತ್ತರ ಕಂಡುಕೊಳ್ಳುವ ಪ್ರಯತ್ನವಾಗಲೀ ಅಲ್ಲಿರುವುದಿಲ್ಲ. ಕೆಲವೊಮ್ಮೆ ಸರಕಾರ ಇಲ್ಲವೇ ತಂದೆತಾಯಂದಿರು ತಮ್ಮ ಗಂಡು ಮಕ್ಕಳನ್ನು ಸರಿತಿದ್ದಬೇಕು ಎಂಬ ಸಿದ್ಧ ಉತ್ತರವನ್ನು ಕಾಣಬಹುದು. ಇವೆಲ್ಲಾ ಮಹಿಳಾ ವಿಮೋಚನೆಯ ವಿಚಾರವನ್ನು ಸಂಕುಚಿತಗೊಳಿಸಿ, ವ್ಯಕ್ತಿಗತ ಮಟ್ಟಕ್ಕಿಳಿಸಿ ನೋಡುವ ಪರಿಪಾಠವಾಗಿದೆ. ಇನ್ನು ಹಲವು ಕಾರ್ಯಕ್ರಮಗಳು ರಮ್ಯತೆಯ ಛಾಪಿನಲ್ಲಿ ಆಯೋಜಿಸಲ್ಪಡುತ್ತವೆ. ಮಹಿಳಾ ಸಾಧಕಿಯರೆಂದು ಕೆಲವರನ್ನು ಗುರುತಿಸುವ, ಕೆಲವು ಸಿನೆಮಾ ನಟಿಯರ ಕಾರ್ಯಕ್ರಮ ಆಯೋಜಿಸುವಷ್ಟಕ್ಕೆ ಸೀಮಿತವಾಗುತ್ತವೆ. ಮಹಿಳಾ ಸಮಾನತೆಯ ವಿಚಾರ ಕೆಲವೇ ವ್ಯಕ್ತಿಗಳ ಸಾಧನೆಗೆ ಸೀಮಿತಗೊಳಿಸಿಬಿಡುತ್ತವೆ. ಮಾಧ್ಯಮ ವಾಹಿನಿಗಳು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲಿ ಮುಂದಿವೆ.

ಇವೆಲ್ಲವೂ ಅಂತಿಮವಾಗಿ ಬಹುಸಂಖ್ಯಾತ ಮಹಿಳೆಯರ ಸಮಸ್ಯೆಗಳು ಹಾಗೂ ಸಂಕಷ್ಟಗಳನ್ನು ಪ್ರತಿನಿಧಿಸದೇ ಅವನ್ನು ಮರೆಮಾಚುವ ಕಾರ್ಯಕ್ರಮಗಳಾಗಿಬಿಡುತ್ತವೆ. ಆಳುವ ಪ್ರಭುತ್ವ ಮತ್ತದರ ಆಡಳಿತಾಂಗಗಳು ಆರ್ಥಿಕ ಹಿಡಿತ, ರಾಜಕೀಯ ಹಿಡಿತ, ಪುರುಷಾಧಿಪತ್ಯಗಳನ್ನು ಬಳಸುತ್ತಾ ಮಹಿಳೆಯರ ಅಸ್ತಿತ್ವ, ಅಸ್ಮಿತೆ, ಸಮಾನತೆಗಳನ್ನು ಹೇಗೆಲ್ಲಾ ವಂಚಿಸುತ್ತಿವೆ; ಅವರ ಶ್ರಮ, ದೇಹ ಹಾಗೂ ದುಡಿಮೆಯನ್ನು ಯಾವ್ಯಾವ ರೀತಿಗಳಲ್ಲಿ ಶೋಷಿಸುತ್ತಿದೆ ಎನ್ನುವ ಮೂಲ ವಿಚಾರಗಳನ್ನು ಮರೆ ಮಾಚುವ, ದಿಕ್ಕು ತಪ್ಪಿಸುವ, ಪಕ್ಕ ಸರಿಸುವ ಕೆಲಸಗಳನ್ನಷ್ಟೇ ಇಂತಹ ಕಾರ್ಯಕ್ರಮಗಳು ಮಾಡಬಲ್ಲವು. ಮಹಿಳಾ ದಿನಾಚರಣೆಯೆಂದಾಗ ಹಿಂದಿನ ಮಹಿಳಾ ಹೋರಾಟಗಳು ಇನ್ನಿತರ ಹೋರಾಟಗಳು ಮಹಿಳೆಯರ ಬದುಕಿನಲ್ಲಿ ಉಂಟುಮಾಡಿದ ಪರಿಣಾಮ, ಬದಲಾವಣೆಗಳನ್ನು ಗುರುತಿಸುವ ಕಾರ್ಯಕ್ರಮವಾಗುವುದರ ಜೊತೆಗೆ ಮಹಿಳಾ ಸಮಾನತೆಗೆ ಈಗಲೂ ಪ್ರಧಾನ ಅಡ್ಡಿಯಾಗಿರುವ ಆಳುವ ವ್ಯವಸ್ಥೆ ಮತ್ತದರ ಬೆಂಬಲಿಗ ಸಂಸ್ಥೆಗಳು, ಪುರುಷಾಧಿಪತ್ಯ ಮತ್ತದರ ಆಚರಣೆಗಳನ್ನು ಗುರಿಮಾಡಬೇಕು. ಪುರುಷಾಧಿಪತ್ಯವೆಂದಾಗ ಅದು ಪುರುಷ ಸೂಚಕವಲ್ಲ. ಸಾಮಾಜಿಕ ವ್ಯವಸ್ಥೆಯ ಸೂಚಕ, ಈ ಸಾಮಾಜಿಕ ವ್ಯವಸ್ಥೆಯ ಭಾಗವಾಗಿರುವ ಮಹಿಳೆಯರಲ್ಲೂ ಪುರುಷಾಧಿಪತ್ಯವಿರುತ್ತದೆ. ಆದರೆ ಅದರ ಲಾಭ ಸಾಮಾಜಿಕ ಕಾರಣದಿಂದಾಗಿ ಮಹಿಳೆಯರಿಗಿಂತಲೂ ಹೆಚ್ಚಾಗಿ ಪುರುಷರಿಗಾಗುತ್ತದೆ ಎನ್ನುವುದನ್ನು ಗುರುತಿಸಬೇಕು.

ಮೊನ್ನೆಯ ದಿಲ್ಲಿ ದಾಳಿಗಳಲ್ಲಿ ವೃದ್ಧರೆಂದೂ ನೋಡದೇ, ಮಕ್ಕಳೆಂದೂ ನೋಡದೇ ಮಹಿಳೆಯರನ್ನು ಹೊಡೆದು ಬಡಿದು, ಲೈಂಗಿಕವಾಗಿ ಹಿಂಸಿಸಿದ ವರದಿಗಳು ಬರುತ್ತಿವೆ. ಇದಕ್ಕೆ ಪ್ರಭುತ್ವ ಮತ್ತದರ ಪಡೆಗಳ ನೇರ ಪ್ರಾಯೋಜನೆ ಹಾಗೂ ಕುಮ್ಮಕ್ಕುಗಳು ಇದ್ದವು ಎಂಬ ವರದಿಗಳೂ ಇವೆ. ಗಂಡ ಹಾಗೂ ಮಕ್ಕಳಿಗೆ ಪೌರತ್ವ ಸಿಕ್ಕಿದರೂ ಮಹಿಳೆಯಾದ ಕಾರಣದಿಂದಾಗಿ ಪೌರತ್ವ ವಂಚಿತವಾಗಿ ಡಿಟೆನ್ಷನ್ ಸೆಂಟರ್‌ಗಳೆಂಬ ಸೆರಮನೆಗಿಂತಲೂ ಕ್ರೂರವಾಗಿರುವ ಕೂಡಿ ಹಾಕುವ ಕೇಂದ್ರಗಳಲ್ಲಿ ಬಂದಿಯಾಗಿರಬೇಕಾದ ವರದಿಗಳು ಅಸ್ಸಾಮಿನಿಂದ ಬರುತ್ತಿವೆ.

ಈ ಎಲ್ಲಾ ಮೂಲಭೂತ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳದ ಮಹಿಳಾ ದಿನಾಚರಣೆಗಳಿಂದ ಮಹಿಳೆಯರ ಹಿತಾಸಕ್ತಿಗಳನ್ನು ಕಾಪಾಡುವ, ಮಹಿಳಾ ಸಮಾನತೆ ಸ್ಥಾಪಿಸುವ ನಿಟ್ಟಿನಲ್ಲಿ ಸಾಗಲು ಸಾಧ್ಯವಾಗುವುದಿಲ್ಲ. ಬದಲಿಗೆ ಮಹಿಳೆಯರನ್ನು ದಿಕ್ಕು ತಪ್ಪಿಸಿ ಭ್ರಮೆ ಮೂಡಿಸುವ ಕಾರ್ಯ ಮಾಡುತ್ತವೆ.

ಇಂದು ನಮ್ಮ ದೇಶವನ್ನು ಹಿಂದೆಂದೂ ಇಲ್ಲದಂತಹ ಆರ್ಥಿಕ ಸಂಕಷ್ಟಗಳಿಗೆ ದೂಡಲಾಗಿದೆ. ಜನಸಾಮಾನ್ಯರ ದುಡಿಮೆಗೆ, ಗಳಿಕೆಗೆ, ಬದುಕಿಗೆ ಯಾವುದೇ ಭದ್ರತೆ ಇಲ್ಲದಂತಹ ಸ್ಥಿತಿ ನಿರ್ಮಿಸಲಾಗಿದೆ. ಇವೆಲ್ಲದರ ನೇರ ಪರಿಣಾಮ ಮಹಿಳೆಯರ ಮೇಲೆ ಹೆಚ್ಚು ಇರುತ್ತದೆ. ಮಹಿಳೆಯರ ಸರಕೀಕರಣಗಳು ವಿಪರೀತ ಹಂತ ತಲುಪಿದೆ. ಅಲ್ಲದೇ ನಮ್ಮ ದೇಶ ಜಾತಿಯಂತಹ ಶೋಷಣೆ ಅಸಮಾನತೆ ಮುಖಕ್ಕೆ ರಾಚುವಂತಿದೆ. ಮೇಲ್ಜಾತಿ ಮೇಲ್ವರ್ಗದ ಮಹಿಳೆಯರಿಗಿಂತ ತಳಪಾಯದ ಸಮುದಾಯದ ಮಹಿಳೆಯರು ಅತೀ ಹೆಚ್ಚು ಶೋಷಣೆಗೊಳಗಾಗಿರುತ್ತಾರೆ. ಯಾಕೆಂದರೆ ಅವರ ಮೇಲೆ ಜಾತಿ, ವರ್ಗ ಹಾಗೂ ಪುರುಷಾಧಿಪತ್ಯದ ಶೋಷಣೆ ಇರುತ್ತದೆ. ಮೇಲ್ಜಾತಿ ಮೇಲ್ವರ್ಗದ ಮಹಿಳೆಯರಿಗೆ ಜಾತಿ ಶೋಷಣೆ ವರ್ಗ ಶೋಷಣೆ ಇಲ್ಲವೆನ್ನಬಹುದು. ಆದರೆ ಹೆಣ್ಣು ಎನ್ನುವ ಕಾರಣಕ್ಕೇನೆ ಅವರು ಲಿಂಗಶೋಷಣೆ ಅಸಮಾನತೆಗಳಿಗೆ ಈಡಾಗುತ್ತಾರೆ.

ವಿಶ್ವ ಆರ್ಥಿಕ ವೇದಿಕೆಯು ಬಿಡುಗಡೆಗೊಳಿಸಿದ 2020ರ ವರದಿಯಲ್ಲಿ ನಮ್ಮ ದೇಶದ ಲಿಂಗ ಸಮಾನತೆಯ ಸೂಚ್ಯಂಕವು 153 ರಾಷ್ಟ್ರಗಳಿಗೆ ಹೋಲಿಸಿದಾಗ 112ನೇ ಸ್ಥಾನದಲ್ಲಿದೆ. ಅಂದರೆ ನೇಪಾಳ, ಶ್ರೀಲಂಕಾ, ಬಾಂಗ್ಲಾ ದೇಶಕ್ಕಿಂತಲೂ ಕಳಪೆ ಸ್ಥಾನದಲ್ಲಿದೆ. ಬಾಂಗ್ಲಾ ದೇಶ 50ನೇ ಸ್ಥಾನದಲ್ಲಿದ್ದರೆ, ನೇಪಾಳ ಹಾಗೂ ಶ್ರೀಲಂಕಾ ಕ್ರಮವಾಗಿ 101 ಹಾಗೂ 102ನೇ ಸ್ಥಾನಗಳಲ್ಲಿವೆ. ಜಾಗತಿಕವಾಗಿ ಮಹಿಳೆಯರ ಸರಾಸರಿ ವರಮಾನವು ಬಹಳ ಕೆಳಮಟ್ಟದಲ್ಲಿದೆ. ಇಂಡಿಯಾದಲ್ಲಿ ಮಹಿಳಾ ವೇತನವು ಪುರುಷರಿಗಿಂತ ಸರಾಸರಿ ಶೇ. 34ಕ್ಕಿಂತಲೂ ಕಡಿಮೆಯಿದೆ. ಇಂಡಿಯಾದ ಮಹಿಳೆಯರು ಕಾರ್ಮಿಕರಾಗಿ ದುಡಿಯುತ್ತಿರುವುದು ಒಟ್ಟು ಕಾರ್ಮಿಕರಲ್ಲಿ ಶೇ. 25ರಷ್ಟು ಮಾತ್ರ. ವೇತನಗಳಲ್ಲಿ ಇಂಡಿಯಾದ ಮಹಿಳೆಯರಿಗೆ ಲಿಂಗತಾರತಮ್ಯ ಕೂಡ ಅತ್ಯಧಿಕ. ಅದು ಜಾಗತಿಕವಾಗಿ 145ನೇ ಸ್ಥಾನದಲ್ಲಿದೆ. ಇನ್ನು ಶಿಕ್ಷಣ, ಆರೋಗ್ಯ, ಆಹಾರ ಮೊದಲಾದ ವಿಚಾರಗಳಲ್ಲಿ ಲಿಂಗತಾರತಮ್ಯಗಳು ಮುಖಕ್ಕೆ ರಾಚುವಂತಿವೆ. ಮಹಿಳಾ ವಿಮೋಚನೆಯೆಂದಾಗ ಮಹಿಳೆಗೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಎಲ್ಲಾ ರೀತಿಯಲ್ಲೂ ಸಮಾನ ಸ್ಥಾನಮಾನಗಳು ಹಕ್ಕುಗಳು ನೈಸರ್ಗಿಕ ನ್ಯಾಯದಷ್ಟು ಸಹಜವಾಗಿ ಸಿಗುವಂತಾಗುವುದು ಎಂದೇ ಗ್ರಹಿಸಬೇಕು. ಇದನ್ನು ಸಾಕಾರಗೊಳಿಸಲು ಶ್ರಮ ಹಾಕದ ಯಾವುದೇ ಚಳವಳಿಗಳು ಆಳುವ ಶಕ್ತಿಗಳಿಗಷ್ಟೇ ಸಹಾಯ ಮಾಡುತ್ತವೆ ಬಿಟ್ಟರೆ ಮಹಿಳಾ ವಿಮೋಚನೆಗೆ ಪೂರಕವಾಗುವುದಿಲ್ಲ. ಮಹಿಳಾ ವಿಮೋಚನೆ ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವೆಂಬ ತಪ್ಪುಗ್ರಹಿಕೆ ಕೂಡ ಆಳವಾಗಿಯೇ ಇದೆ. ವಾಸ್ತವದಲ್ಲಿ ಮಹಿಳಾ ವಿಮೋಚನೆಯೆನ್ನುವುದು ಸಾಮಾಜಿಕ ನ್ಯಾಯ ಹಾಗೂ ಸಮಾಜೋಆರ್ಥಿಕ ಸಮಾನತೆಯನ್ನು ಬಯಸುವ ಎಲ್ಲರ ಕರ್ತವ್ಯವಾಗಿದೆ. ದೇಶದ ಅಧರ್ದಷ್ಟು ಇರುವ ಮಹಿಳಾ ಸಮೂಹದ ವಿಮೋಚನೆಯಿಲ್ಲದೆ ಯಾವುದೇ ಸಮಾನತೆಯೂ ಸಾಕಾರಗೊಳ್ಳಲು ಸಾಧ್ಯವಾಗುವುದಿಲ್ಲ.

ಪ್ರಭುತ್ವ ಇದುವರೆಗೂ ಹಾಕಿಕೊಂಡಿದ್ದ ತನ್ನ ಪ್ರಜಾತಾಂತ್ರಿಕ ಪರದೆಗಳನ್ನೆಲ್ಲಾ ಹರಿದುಹಾಕಿ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ನಿರಂಕುಶಾಧಿಕಾರದ ನಗ್ನತೆಯನ್ನು ಸಂಪೂರ್ಣವಾಗಿ ತೋರಿಸಲು ಆರಂಭಿಸಿರುವ ಸಂದರ್ಭವಾಗಿದೆ. ಒಂದು ಮಟ್ಟದಲ್ಲಿ ಇದುವರೆಗೂ ಇದ್ದ ಸಾಂವಿಧಾನಿಕ ರಕ್ಷಣೆ ಕೂಡ ಮರೀಚಿಕೆಯಂತಾಗುತ್ತಿದೆ.

 ಇಂತಹ ಸಂದರ್ಭದಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ಮಹಿಳಾ ಚಳವಳಿಯೂ ಸೇರಿದಂತೆ ಎಲ್ಲಾ ಚಳವಳಿಗಳೂ ಹೆಚ್ಚು ಗಂಭೀರವಾಗಿ ಗಮನಿಸುವ ಅಗತ್ಯವಿಲ್ಲವೇ.?
 
ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News