×
Ad

ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-03-10 19:22 IST

ಬೆಂಗಳೂರು, ಮಾ.10: ಯಾವುದೇ ರೀತಿಯ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ. ಕೋವಿಡ್ 19 ನಿಯಂತ್ರಣಕ್ಕೆ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಸಚಿವ ಶ್ರೀರಾಮುಲು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಅಮೆರಿಕದಿಂದ ಬಂದಿದ್ದ ಟೆಕ್ಕಿ, ಅವರ ಪತ್ನಿ ಮತ್ತು ಮಗುವಿನಲ್ಲಿ ಸೋಂಕಿನ ಲಕ್ಷಣ ಪತ್ತೆಯಾಗಿದೆ. ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಒಟ್ಟಾರೆ, ಕಳೆದ ಎರಡು ದಿನಗಳಲ್ಲಿ ಕರ್ನಾಟಕದಲ್ಲಿ ನಾಲ್ಕು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದರು.

ಕೊರೋನ ವೈರಸ್ (ಕೋವಿಡ್ 19) ಸೋಂಕು ಇರುವ ದೇಶಗಳಿಂದ ಬಂದಿರುವ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದ 1048 ಜನರನ್ನು ಅವಲೋಕನೆಗಾಗಿ ಗುರುತಿಸಲಾಗಿದೆ ಎಂದ ಅವರು, ಈವರೆಗೆ ರೋಗ ಲಕ್ಷಣ ಇರುವ 446 ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. 389 ಮಾದರಿಗಳು ನೆಗೆಟಿವ್ ಎಂದು ವರದಿಯಾಗಿದ್ದು, 4 ಮಾದರಿಗಳು ಪಾಸಿಟಿವ್ ಎಂದು ತಿಳಿದುಬಂದಿದೆ. ಬಾಕಿ ಮಾದರಿಗಳ ವರದಿಗಾಗಿ ಕಾಯುತ್ತಿದ್ದೇವೆ ಎಂದು ಯಡಿಯೂರಪ್ಪ ವಿವರಿಸಿದರು.

ಸೂಚನೆ: ಬೆಂಗಳೂರು, ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಂಗಳೂರು ಹಾಗೂ ಕಾರವಾರ ಬಂದರುಗಳಲ್ಲಿ ಸುಮಾರು 95 ಸಾವಿರಕ್ಕೂ ಹೆಚ್ಚು ಪ್ರಯಾಣಿಕರ ತಪಾಸಣೆ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ಕಟ್ಟುನಿಟ್ಟಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮುನ್ನೆಚ್ಚರಿಕೆ ಕ್ರಮವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಮೊದಲೇ ಶಿಶು ವಿಹಾರ, ಎಲ್ಕೆಜಿ, ಯುಕೆಜಿ ಶಾಲೆಗಳು, ಅಂಗನವಾಡಿಗಳಿಗೂ ರಜೆ ಘೋಷಿಸಲಾಗಿತ್ತು. ವೈದ್ಯಕೀಯ ಶಿಕ್ಷಣ ಸಚಿವರು, ಆರೋಗ್ಯ ಸಚಿವರು ಪ್ರತಿದಿನ ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ ಎಂದ ಅವರು, ರಾಜ್ಯದಲ್ಲಿ ಸೋಂಕು ಹರಡುವ ಸಾಧ್ಯತೆಯನ್ನು ತಡೆಗಟ್ಟಲು ನಮ್ಮ ಸರಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಚೀನಾ, ಇರಾನ್, ದಕ್ಷಿಣ ಕೊರಿಯಾ, ಜಪಾನ್, ಇಟಲಿ ಸೇರಿದಂತೆ ಇತರ ಬಾಧಿತ ದೇಶಗಳಿಂದ ಅಥವಾ ಅವುಗಳ ಮೂಲಕ ಪ್ರಯಾಣಿಸಿದವರು ಹತ್ತಿರದ ಆಸ್ಪತ್ರೆಗೆ ವರದಿ ಮಾಡಿಕೊಳ್ಳಬೇಕು ಅಥವಾ ಆರೋಗ್ಯ ಸಹಾಯವಾಣಿ 104ಗೆ ಕರೆ ಮಾಡಬೇಕು. ಜತೆಗೆ ಈ ದೇಶಗಳಿಂದ ಅಥವಾ ಈ ದೇಶಗಳ ಮೂಲಕ ಹಿಂತಿರುಗಿದವರು ಬಂದ ದಿನದಿಂದ 14 ದಿನಗಳ ಕಾಲ ಪ್ರತ್ಯೇಕವಾಗಿರಬೇಕು ಎಂದು ಯಡಿಯೂರಪ್ಪ ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಶ್ರೀರಾಮುಲು, ಡಾ.ಸುಧಾಕರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

‘ಪರೀಕ್ಷೆಗೆ ಸೌಲಭ್ಯ’
ರಾಜ್ಯದ ವಿವಿಧ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್‌ಗಳನ್ನು ಸ್ಥಾಪಿಸಲಾಗಿದೆ. ಅದೇ ರೀತಿ, ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಜಿಯ ಬೆಂಗಳೂರು ಘಟಕ ಹಾಗೂ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ರಕ್ತ ಪರೀಕ್ಷೆ ಸೌಲಭ್ಯ ಕಲ್ಪಿಸಲಾಗಿದೆ. ಮೈಸೂರು, ಹಾಸನ ಹಾಗೂ ಶಿವಮೊಗ್ಗ ಮೆಡಿಕಲ್ ಕಾಲೇಜುಗಳ ಪ್ರಯೋಗಾಲಯಗಳಲ್ಲಿ ಸೋಂಕು ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕಿತರ ಚಿಕಿತ್ಸೆಗೆ 700 ಹಾಸಿಗೆಗಳನ್ನು ಗುರುತಿಸಲಾಗಿದೆ.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಮಾಸ್ಕ್ ಅಗತ್ಯ ಇಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ
ರಾಜ್ಯದಲ್ಲಿ ಸರ್ಜಿಕಲ್ ಮಾಸ್ಕ್, ಔಷಧಿಗೆ ಕೊರತೆ ಇಲ್ಲ. ಎಲ್ಲರೂ ಮಾಸ್ಕ್ ಧರಿಸುವ ಅಗತ್ಯ ಇಲ್ಲ. ಸೋಂಕಿತರು ಮತ್ತು ಅವರ ನಿಕಟ ಸಂಪರ್ಕ ಹೊಂದಿರುವವರು ಮಾಸ್ಕ್ ಧರಿಸಿದರೆ ಸಾಕು. ಅಲ್ಲದೆ, ಮಾಸ್ಕ್ ಅಥವಾ ಔಷಧಿಗೆ ಹೆಚ್ಚು ಹಣ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಔಷಧ ನಿಯಂತ್ರಕರಿಗೆ ಸೂಚಿಸಲಾಗಿದೆ.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News