ಆಡಳಿತ ಪಕ್ಷವೇ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದು ಇತಿಹಾಸದಲ್ಲೆ ಮೊದಲು: ಸಿದ್ದರಾಮಯ್ಯ
ಬೆಂಗಳೂರು, ಮಾ. 11: ಕೊರೋನ ವೈರಸ್ ಭೀತಿ, ಪ್ರವಾಹ ಸಂತ್ರಸ್ತರ ಸಮಸ್ಯೆ, ಅಭಿವೃದ್ಧಿ ಕಾರ್ಯಗಳ ಸ್ಥಗಿತ ಸೇರಿದಂತೆ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ಕಳಕಳಿ ಇಲ್ಲ. ಹೀಗಾಗಿ ಆಡಳಿತ ಪಕ್ಷವೇ ಕಲಾಪ ನಡೆಯದಂತೆ ಗದ್ದಲ ಸೃಷ್ಟಿಸುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬುಧವಾರ ವಿಧಾನಸಭೆಯ ಕಲಾಪ ಮುಂದೂಡಿಕೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹಕ್ಕುಚ್ಯುತಿ ನೋಟಿಸ್ ನೀಡಿದ್ದು, ವಿಷಯ ಚರ್ಚೆಗೆ ಅವಕಾಶ ಕೋರಲಾಗಿತ್ತು. ಪ್ರಶ್ನೋತ್ತರ ಕಲಾಪದ ಅವಕಾಶ ನೀಡುವುದಾಗಿ ಸ್ಪೀಕರ್ ತಿಳಿಸಿದ್ದರು. ಆಡಳಿತ ಪಕ್ಷವೂ ಈ ಸಂಬಂಧ ಪತ್ರ ನೀಡಿದ್ದರೂ ಅದಕ್ಕೂ ಅವಕಾಶ ನೀಡಬೇಕು ಎಂದು ನಾನು ಸ್ಪೀಕರ್ ಅವರಿಗೆ ಮನವಿ ಮಾಡುತ್ತೇನೆ. ವಿಪಕ್ಷಕ್ಕೆ ಮೊದಲು ಅವಕಾಶ ನೀಡಬೇಕು. ಆದರೆ, ಆಡಳಿತ ಪಕ್ಷದವರಿಗೆ ಸದನ ನಡೆಯುವುದು ಬೇಕಿಲ್ಲ. ಜನರ ಸಮಸ್ಯೆಗಳ ಚರ್ಚೆ ಆಗುವುದು ಸರಕಾರಕ್ಕೆ ಬೇಕಿಲ್ಲ. ಹೀಗಾಗಿ ಅಧಿವೇಶನ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಮಂಡಿಸಿದ ಬಜೆಟ್ ಜನವಿರೋಧಿಯಾಗಿದೆ. ಈ ಕುರಿತು ಚರ್ಚೆಯಾಗಬಾರದೆಂಬ ಉದ್ದೇಶದಿಂದಲೇ ಯತ್ನಾಳ್ ವಿಚಾರ ಪ್ರಸ್ತಾಪಿಸಿದ ವೇಳೆ ಮೌನವಹಿಸಿದ್ದರು. ಇದೀಗ ಅಸಹಾಯಕತೆಯಿಂದ ಮೌನಕ್ಕೆ ಶರಣಾಗಿರುವಂತೆ ಕಾಣುತ್ತಿದೆ ಎಂದು ಟೀಕಿಸಿದರು.
ಇತಿಹಾಸದಲ್ಲೇ ಮೊದಲು: ಕಲಾಪದಲ್ಲಿ ವಿಪಕ್ಷಗಳು ಗದ್ದಲ ಸೃಷ್ಟಿಸುವುದು ಸಹಜ. ಆದರೆ, ಇದೇ ಮೊದಲ ಬಾರಿಗೆ ಆಡಳಿತ ಪಕ್ಷ ಗದ್ದಲವೆಬ್ಬಿಸಿ ಕಲಾಪ ನಡೆಯದಂತೆ ಅಡ್ಡಿಪಡಿಸುತ್ತಿರುವುದು ಇತಿಹಾಸದಲ್ಲೆ ಮೊದಲು. ಇದು ಸಂವಿಧಾನ ವಿರೋಧಿ ನಿಲುವು ಎಂದು ವಾಗ್ದಾಳಿ ನಡೆಸಿದರು.
ಸದನ ಕರೆದಿದ್ದೇಕೆ?: ‘ಆಡಳಿತಾರೂಢ ಬಿಜೆಪಿಯವರು ಸ್ಪೀಕರ್ ಮಾತಿಗೂ ಬೆಲೆ ಕೊಡದೆ ಸದನದಲ್ಲಿ ಅಡ್ಡಿ ಪಡಿಸುತ್ತಿರುವುದನ್ನು ನೋಡಿದರೆ ಕಲಾಪ ನಡೆಯದಂತೆ ತಡೆಯುವ ದುರುದ್ದೇಶ ಅವರಿಗಿದ್ದ ಹಾಗೆ ಕಾಣುತ್ತಿದೆ. ಹಾಗಿದ್ದರೆ ಅಧಿವೇಶನ ಕರೆದಿರುವುದು ಯಾಕೆ?’ ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರಶ್ನಿಸಿದರು.
‘ಸಚಿವ ಡಾ.ಸುಧಾಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ನಿನ್ನೆಯೇ ಸ್ಪೀಕರ್‌ಗೆ ನೋಟೀಸ್ ನೀಡಿದ್ದರೂ ನನಗೆ ಮಾತನಾಡಲು ಅವಕಾಶ ನೀಡದಿರುವುದು ಸರಿ ಅಲ್ಲ. ಮೊದಲು ನನಗೆ ಅವಕಾಶ ನೀಡಿ ನಂತರ ಆಡಳಿತ ಪಕ್ಷ ಹಕ್ಕುಚ್ಯುತಿ ಮಂಡಿಸಲಿ’
-ಸಿದ್ದರಾಮಯ್ಯ, ವಿಪಕ್ಷ ನಾಯಕ