×
Ad

ಸದನದಲ್ಲಿ ಚರ್ಚೆಯಾದ ರಾಮಾಯಣ-ಮಹಾಭಾರತ ಪ್ರಸಂಗಗಳು

Update: 2020-03-11 18:20 IST

ಬೆಂಗಳೂರು, ಮಾ.11: ಪ್ರಜಾಪ್ರಭುತ್ವ ರಕ್ಷಣೆ ಹಾಗೂ ಇಂದಿನ ರಾಜಕೀಯ ವ್ಯವಸ್ಥೆಗೆ ಸಂಬಂಧಿಸಿದ ಚರ್ಚೆಯಲ್ಲಿ ರಾಮಾಯಣ-ಮಹಾಭಾರತ ಪ್ರಸಂಗಗಳು ವಿಧಾನಪರಿಷತ್ ಕಲಾಪದಲ್ಲಿ ಮೂಡಿಬಂದವು.

ಬುಧವಾರ ಪರಿಷತ್ತಿನಲ್ಲಿ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಹಾಗೂ ಜೆಡಿಎಸ್ ಸದಸ್ಯ ಬೋಜೇಗೌಡ ವಿಷಯ ಪ್ರಸ್ತಾಪಿಸುವ ವೇಳೆ ಇಂದಿನ ವ್ಯವಸ್ಥೆಯನ್ನು ಉದಾಹರಣೆ ನೀಡುವಾಗ ರಾಮಾಯಣ ಮತ್ತು ಮಹಾಭಾರತದ ವಿವಿಧ ಘಟನೆಗಳ ಮೂಲಕ ಮಾರ್ಮಿಕವಾಗಿ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದರು.

ರಾಮರಾಜ್ಯ, ಸೀತೆಯ ವನವಾಸ, ಕರ್ಣನ ಸ್ವಾಮಿನಿಷ್ಠೆ, ಕೃಷ್ಣನ ನಿಷ್ಠುರವಾದದಂತಹ ಹಲವು ಪ್ರಸಂಗಗಳು ವಿಷಯವಸ್ತುವಾಗಿ ಇಬ್ಬರೂ ಸ್ವಾರಸ್ಯಕರ ಚರ್ಚೆ ನಡೆಸಿದರು. ಜೆಡಿಎಸ್‌ನ ಬೋಜೇಗೌಡ, ಲಕ್ಷ್ಮಣನು ಸೀತೆಯನ್ನು ಕಾಡಿಗೆ ಬಿಡಲು ಕರೆದೊಯ್ಯುತ್ತಾನೆ. ಅಂತಹ ಸಂದರ್ಭದಲ್ಲಿ ತುಂಬು ಗರ್ಭಿಣಿಯಾದ ಸೀತೆಗೆ ತನ್ನನ್ನು ಕಾಡಿನಲ್ಲಿ ಬಿಡಲು ಕೊಂಡೊಯ್ಯಲಾಗುತ್ತಿದೆ ಎಂಬ ಮಾಹಿತಿಯೂ ಇರುವುದಿಲ್ಲ ಎಂದು ಪ್ರಸಂಗಗಳನ್ನು ಸಂಸ್ಕೃತ ಶ್ಲೋಕಗಳೊಂದಿಗೆ ಸದನದಲ್ಲಿ ವರ್ಣಿಸುವ ಮೂಲಕ ಗಮನಸೆಳೆದರು. ಅಲ್ಲದೆ, ಒಂದು ಗೀತೆಯನ್ನೂ ಹಾಡಿದರು.

ತೇಜಸ್ವಿನಿಗೌಡ ಮಾತನಾಡಿ, ರಾಮನು ಒಬ್ಬ ಗೂಢಾಚಾರಿಯ ಮಾತು ಕೇಳಿ, ತನ್ನ ಪತ್ನಿ ಸೀತೆಯನ್ನು ಕಾಡಿಗೆ ಕಳಿಸುತ್ತಾನೆ. ಅಂದರೆ, ರಾಮನ ಆಡಳಿತಾವಧಿಯಲ್ಲಿ ಕಟ್ಟಕಡೆಯ ವ್ಯಕ್ತಿಗೂ ಮಹತ್ವ ನೀಡುತ್ತಿದ್ದರು ಎಂದು ಹೇಳಿದರು. ಇಂದು ನಾವು ರಾಮರಾಜ್ಯದ ಬಗ್ಗೆ ಮಾತನಾಡುತ್ತೇವೆ. ಆದರೆ, ರಾಮನಿಗೆ ಇದ್ದ ಬದ್ಧತೆ ನಮಗೆ ಇದೆಯಾ ಎಂದು ಸ್ವವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.

ಮಹಾತ್ಮ ಗಾಂಧೀಜಿಗೆ ಇದೇ ಕಾರಣಕ್ಕೆ ರಾಮನು ಪ್ರೇರಣೆಯಾಗಿದ್ದ. ಇದುವರೆಗೂ ಆ ರಾಮರಾಜ್ಯವನ್ನು ಕಾಣಲು ನಮಗೆ ಸಾಧ್ಯವಾಗಿಲ್ಲ. ರಾಮನಂತಹ ನಿಷ್ಠೆ ಹಾಗೂ ಪ್ರಜಾಪ್ರಭುತ್ವದ ಪರಿಪಾಲನೆಯನ್ನು ಈಗ ಕಂಡುಕೊಳ್ಳಲು ನಮಗೆ ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

ಕರ್ಣನ ಸ್ವಾಮಿನಿಷ್ಠೆ ಈಗ ಸಾಧ್ಯವೇ?: ಮಹಾಭಾರತದ ಪ್ರಸಂಗಗಳನ್ನೂ ಉಲ್ಲೇಖಿಸಿದ ಬೆನ್ನಲ್ಲೇ ಬೋಜೇಗೌಡ, ‘ಕರ್ಣನಿಗೆ ಕೃಷ್ಣನು ದುರ್ಯೋಧನನನ್ನು ಬಿಟ್ಟು ಬಾ. ಇಡೀ ರಾಜ್ಯವೇ ನಿನ್ನದಾಗುತ್ತದೆ ಎಂದು ಹೇಳುತ್ತಾನೆ. ಆದರೆ, ಇದಕ್ಕೆ ಕರ್ಣ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಯಾಕೆಂದರೆ, ಕರ್ಣನಲ್ಲಿ ದುರ್ಯೋಧನನ ಬಗ್ಗೆ ಇರುವ ಸ್ವಾಮಿನಿಷ್ಠೆ. ಈಗಿರುವ ರಾಜಕಾರಣಿಗಳಲ್ಲಿ ಈ ಸ್ವಾಮಿನಿಷ್ಠೆ ಕಾಣಲು ಸಾಧ್ಯವೇ? ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ’ ಎಂದು ಸಚಿವ ಬಿ.ಸಿ. ಪಾಟೀಲರ ಮುಖ ನೋಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News