×
Ad

ಬಂಡೀಪುರದಲ್ಲಿ ಆನೆಯತ್ತ ಗುಂಡು ಹಾರಿಸಿದ ವಿಡಿಯೋ ವೈರಲ್: ಅರಣ್ಯ ಸಿಬ್ಬಂದಿ ವಜಾ

Update: 2020-03-12 12:58 IST

ಬೆಂಗಳೂರು : ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಆನೆಯತ್ತ  ಗುಂಡು ಹಾರಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ  ಬೆನ್ನಲ್ಲೇ ಅರಣ್ಯ ಇಲಾಖೆ  ಒಬ್ಬ ಸಿಬ್ಬಂದಿಯನ್ನು  ಸೇವೆಯಿಂದ ವಜಾಗೊಳಿಸಿದ್ದು ಇನ್ನೊಬ್ಬರನ್ನು ವಿಚಾರಣೆಗೆ ಗುರಿಪಡಿಸಲಾಗಿದೆ.

ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದ್ದು  ಅರಣ್ಯ ಗಸ್ತು ಪಡೆಯ ಸಿಬ್ಬಂದಿಯೊಬ್ಬರು ಈ ವೀಡಿಯೋ ಚಿತ್ರೀಕರಿಸಿದ್ದರು. ಆನೆಗೆ ಗುಂಡಿಕ್ಕಿದ್ದಕ್ಕಾಗಿ ವಜಾಗೊಂಡಿರುವ ರಹೀಂ ಎಂಬಾತ ತಾತ್ಕಾಲಿಕ ಉದ್ಯೋಗಿಯೆನ್ನಲಾಗಿದೆ. ಉಮೇಶ್ ಎಂಬ ಇನ್ನೊಬ್ಬ ಖಾಯಂ ಉದ್ಯೋಗಿಯ ವಿಚಾರಣೆ ನಡೆಯುತ್ತಿದೆ.

ವೀಡಿಯೋದಲ್ಲಿ ಆನೆಯು ರೈಲು ಹಳಿಯ ಬ್ಯಾರಿಕೇಡ್ ದಾಟಲು ಯತ್ನಿಸುತ್ತಿರುವುದು  ಹಾಗೂ ಈ ಸಂದರ್ಭ ಅರಣ್ಯ ಸಿಬ್ಬಂದಿ ಅದರತ್ತ ಗುಂಡು ಹಾರಿಸಿರುವುದು ಕಾಣಿಸುತ್ತದೆ. ವೀಡಿಯೋವನ್ನು ಮಾರ್ಚ್ 7ರಂದು ತೆಗೆಯಲಾಗಿದ್ದರೂ ಮಾರ್ಚ್ 11ರಂದು ಅದು ಬೆಳಕಿಗೆ ಬಂದಾಗ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಆನೆ ರೈಲು ಬ್ಯಾರಿಕೇಡ್‍ ಗೆ ಹಾನಿಯುಂಟು ಮಾಡುವುದನ್ನು ತಡೆಯಲು ಹಾಗೂ ಅದನ್ನು ಓಡಿಸಲು ಗುಂಡು ಹಾರಿಸಲಾಗಿತ್ತೆಂದು ಅರಣ್ಯ ಇಲಾಖೆ ಅಧಿಕಾರಿಗಳು ಆರಂಭದಲ್ಲಿ  ಘಟನೆಯನ್ನು ಸಮರ್ಥಿಸಲು ಯತ್ನಿಸಿದ್ದರು.

ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡು ಆನೆಗೆ ತಾಗುವುದು ಕೂದಲೆಳೆಯಿಂದ ತಪ್ಪಿದ್ದು ಬದಲು ಗುಂಡು ರೈಲ್ ಬ್ಯಾರಿಕೇಡಿಗೆ ತಗಲಿದೆ. ಇದರಿಂದ ಗಾಬರಿಗೊಂಡ ಆನೆ ಸ್ಥಳದಿಂದ ಪರಾರಿಯಾಗಿತ್ತು. ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಹಡಿಯಾಳ ಮತ್ತು ಓಂಕಾರ ರೇಂಜ್ ನಡುವೆ ಈ ಘಟನೆ ನಡೆದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

"ಬ್ಯಾರಿಕೇಡ್ ದಾಟಿ ಆನೆ ಅರಣ್ಯ ಪ್ರದೇಶ ಪ್ರವೇಶಿಸಲು ಯತ್ನಿಸುತ್ತಿತ್ತು. ಸುಮಾರು ನಾಲ್ಕೈದು ಆನೆಗಳು  ಹಾಗೂ ಒಂದು ತಾಯಿ ಆನೆ ಮತ್ತು ಮರಿಯಾನೆ ನಿಯಮಿತವಾಗಿ ಈ ಪ್ರದೇಶ ದಾಟಿ ಹತ್ತಿರದ ಗದ್ದೆಗಳಲ್ಲಿ ದಾಂಧಲೆಗೈಯ್ಯುತ್ತವೆ. ಇದೇ ಕಾರಣಕ್ಕೆ ಆನೆಯಗಳನ್ನು ದೂರ ಓಡಿಸಲು ನಿಯಮಿತವಾಗಿ  ಕಾರ್ಯಾಚರಣೆ ನಡೆಸಲಾಗುತ್ತದೆ. ಆದರೆ ಗುಂಡು ಹಾರಿಸಲಾಗುವುದಿಲ್ಲ'' ಎಂದು ಬಂಡೀಪುರ ಹುಲಿ ಸಂರಕ್ಷಣಾ ವಲಯದ ನಿರ್ದೇಶಕ ಟಿ ಬಾಲಚಂದ್ರ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News